ಸಚಿವ ಪ್ರಿಯಾಂಕ್‌ ಏಳಿಗೆ ಸಹಿಸದ ಬಿಜೆಪಿ ನಾಯಕರಿಂದ ಇಲ್ಲಸಲ್ಲದ ಹೇಳಿಕೆ: ಶಾಸಕ ಅಲ್ಲಂಪ್ರಭು ಪಾಟೀಲ್‌ ಖಂಡನೆ

ಕಲಬುರಗಿ:ಸೆ.2:ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಪ್ರಗತಿಪರ ನಿಲುವು, ಎಲ್ಲರನ್ನು ತೆಗೆದುಕೊಂಡು ಹೋಗುವ ಅವರ ರೀತಿ ನೀತಿಗಳನ್ನು ಸಹಿಸಿಕೊಳ್ಳದೇ ಕಲಬುರಗಿ ಸಂಸದ ಡಾ. ಉಮೇಶ ಜಾಧವ್‌ ಪ್ರಚೋದನಕಾರಿ ಹೇಳಿಕೆ ಕೊಡುತ್ತ ವಿಷಯಕ್ಕೆ ಬೇರೆ ರೂಪ ಕೊಡುತ್ತಿದ್ದಾರೆ. ಬಿಜೆಪಿ ಸಂಸದರ ಈ ನಿಲುವು ಖಂಡಿಸುತ್ತೇನೆ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.

ಹೇಳಿಕೆ ನೀಡಿರುವ ಅವರು ಪಾಲಿಕೆಯಲ್ಲಿನ ಘಟನೆ ಬಗ್ಗೆ ಅಲ್ಲಿನ ನೌಕರ ದೂರು ನೀಡಿದ್ದಾರೆ. ಪೊಲೀಸರು ಆ ಬಗ್ಗೆ ನೋಡಿಕೊಳ್ಳುತ್ತಾರೆ. ಅದನ್ನೇ ಎಳೆದು ತಂದು ಡಾ. ಜಾಧವ್ ರಾಜಕೀಯ ಮಾಡುತ್ತಿರೋದು ಸರಿಯಲ್ಲ. ಸಂಸದರಾಗಿ ಇಡೀ ಅವಧಿ ಏನೂ ಪ್ರಗತಿ ಯೋಜನೆಗಳನ್ನು ತಾರದ ಜಾಧವ್‌ ಸಲ್ಲದ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಅನೇಕ ಅಭಿವೃದ್ಧಿ ಯೋಜನೆಗಳು ಕಲಬುರಗಿಯಿಂದ ಕೈ ಬಿಟ್ಟು ಹೋದಾಗ ಇವರೆಲ್ಲಿದ್ದರು? ಏನು ಮಾಡುತ್ತಿದ್ದರು ಮೊದಲು ಸುದ್ದಿಗೋಷ್ಠಿ ಕರೆದು ಹೇಳಲಿ, ಅದನ್ನು ಬಿಟ್ಟು ಪ್ರಚೋದನಕಾರಿ ಹೇಳಿಕೆ ಕೊಡುತ್ತ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುತ್ತಿದ್ದಾರೆಂದು ಶಾಸಕ ಪಾಟೀಲ್‌ ದೂರಿದ್ದಾರೆ.

ರೇಲ್ವೆ ಡಿವಿಜನ್‌ ಕಚೇರಿ ಕೈಬಿಟ್ಟು ಹೋಯ್ತು, ಹೊಸ ರೈಲು ಕಲಬುರಗಿ- ಬೆಂಗಳೂರು ಇನ್ನು ಓಡುತ್ತಿಲ್ಲ, ಹೊಸ ಯೋಜನೆ ಒಂದು ತಂದಿಲ್ಲ. ಪಿಎಂ ಮಿತ್ರ ಟೆಕ್ಸಟೈಲ್‌ ಯೋಜನೆ ಎಲ್ಲಿದೆ? ಅಲ್ಲೇನು ಸಾಗಿದೆ? ಇಂತಹದ್ದನ್ನೆಲ್ಲ ಹೇಳಲು ಜನರಿಗೆ ಉತ್ತರ ಕೊಡಲು ಮುಂದೆ ಬರೋದು ಬಿಟ್ಟು ಸಲ್ಲದ ವಿಚಾರಗಳನ್ನೇ ದೊಡ್ಡದು ಮಾಡುತ್ತ ತಮಗೆ ಜನ ಕೊಟ್ಟ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಡಾ. ಜಾಧವ್‌ ಇಂತಹ ಟೀಕೆಗಳನ್ನು ಬಿಟ್ಟು ಮೊದಲು ಪ್ರಗತಿ ಯೋಜನೆಗಳ ಬಗ್ಗೆ ಮಾತನಾಡಲಿ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್‌ ಆಗ್ರಹಿಸಿದ್ದಾರೆ.

ಪ್ರಿಯಾಂಕ್‌ ಖಗೆರ್ರ್ರ ಎಂದಿಗೂ ಒಬ್ಬರನ್ನು ಎತ್ತಿ ಕಟ್ಟುವುದಾಗಲಿ, ಹಲ್ಲೆಯಂತಹ ಘಟನೆಗಳಿಗೆ ಪ್ರೇರಣೆ ಕೊಡುವಂತಹ ಕೆಲಸ, ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ಪಾಲಿಕೆ ಸೇರಿದಂತೆ ಇಡೀ ಜಿಲ್ಲಾಡಳಿತದಲ್ಲಿ ಶಿಸ್ತು ಬರಬೇಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಅನೇಕ ಕಟ್ಟುನಿಟ್ಟು ಯೋಜನೆ ತರುತ್ತಿದ್ದಾರೆ. ಕಲಬುರಗಿ ಕನೆಕ್ಟ್‌ನಂತಹ ಯೋಜನೆ ರೂಪಿಸಿ ಜನರಿಗೆ ಆಡಳಿತ ಹತ್ತಿರವಾಗುವಂತೆ ಮಾಡಿದ್ದಾರೆ. ಇದಕ್ಕೆಲ್ಲ ಡಾ. ಜಾಧವ್‌ ಏನು ಹೇಳುತ್ತಾರೆ. ಪಾಲಿಕೆಯ ಹಲ್ಲೆ ಘಟನೆಯನ್ನೇ ದೊಡ್ಡದು ಮಾಡುತ್ತ ್ದರ ಹಿಂದೆ ಸಚಿವರ ಕೈವಾಡವಿದೆ ಎಂದು ಹೇಳೋದು ಜಾಧವ ಅವರಿಗೆ ಶೋಭೆ ತರೋದಿಲ್ಲವೆಂದು ಶಾಸಕ ಅಲ್ಲಮಪ್ರಭು ಹೇಳಿದ್ದಾರೆ.

ಬಿಜೆಪಿಯ ನಾಯಕರುಗಳುಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಬೆಂಬಲಿಸಿ ಬಿಜೆಪಿ ಪಕ್ಷದಲ್ಲಿ ಬೆಳೆಸುತ್ತಿದ್ದಾರೆ.ಲೋಕಸಭೆ ಸದಸ್ಯ ಡಾ. ಉಮೇಶ ಜಾಧವ ಅವರು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಕೊಡದೇ ಈ ಹಿಂದೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಜಿಲ್ಲೆಗೆ ತಂದ ಅನೇಕಜನಪರ ಯೋಜನೆಗಳನ್ನು ಉಳಿಸಿಕೊಳ್ಳದೆ ಅಸಹಾಯಕರಾಗಿ ಚಡಪಡಿಸುತ್ತಿದ್ದಾರೆ.

ಇವರ ಹಣೆಬರಹಕ್ಕೆ ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ತಮ್ಮ ಅವಧಿಯಲ್ಲಿ ಹೆಚ್ಚಿಗೆ ಅನುದಾನ ತರಲು ಕೂಡಾ ಆಗಲಿಲ್ಲ. ಹೆದ್ದಾರಿ ಯೋಜವನೆ, ರೇಲ್ವೆ ಯೋಜನೆ ತರೋದು ದೂರದ ಮಾತು, ಮಂಜೂರಾದ ಯೋಜನೆಗಳು ಕೈಬಿಟ್ಟು ಹೋದರೂ ಅವನ್ನು ತಡೆಯಲಾಗದೆ ಡಾ. ಜಾದವ್‌ ಅಸಹಾಯಕತೆ ತೋರುತ್ತ ದಿನ ದೂಡುತ್ತಿದ್ದಾರೆ. ಇಂತಹವರಿಂದ ಕಾಂಗ್ರೆಸ್‌ ಪಕ್ಷ, ಅಲ್ಲಿನ ಸಚಿವರು, ಶಾಸಕರು ಯಾವುದೇ ಪಾಠ ಕಲಿಯೋದು ಬೇಕಿಲ್ಲವೆಂದು ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.