ಸಚಿವ ಪ್ರಭು ಚವ್ಹಾಣ ವಿವಾದಾತ್ಮಕ ಹೇಳಿಕೆ : ಕಾಂಗ್ರೆಸ್ ಖಂಡನೆ

ಔರಾದ :ಜೂ.9: ಪಶು ಸಂಗೋಪನಾ ಸಚಿವ ಹಾಗೂ ಬೀದರ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರು ಗ್ರಾಮ ಸಂಚಾರ ಕೈಗೊಂಡ ಸಂದರ್ಭದಲ್ಲಿ “ದೂರು ಕೊಡುವವರಿಗೆ ಠೊಕೊ, ಡೇಲಿ ಡೇಲಿ ಕಂಪ್ಲೈಂಟ್ ಕರನೆವಾಲೊಕೊ ಸಿದಾಕರೋ” ಎಂದು ಬಹಿರಂಗವಾಗಿ ಹೇಳಿದ ಅವಾಚ್ಯ ಶಬ್ದಗಳ ಹೇಳಿಕೆಯನ್ನು ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಧಾಕರ ಕೊಳ್ಳೂರ ತೀವ್ರವಾಗಿ ಖಂಡಿಸಿದ್ದಾರೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೂರು ಕೊಟ್ಟವರಿಗೆ ಹೊಡೆಯಿರಿ ತಾಲೂಕಿನ ದಾಬಕಾ ಗ್ರಾಮ ಸಂಚಾರದ ವೇಳೆ ಬೆಂಬಲಿಗರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವ ಕ್ಯಾಬಿನೆಟ್ ದರ್ಜೆ ಸಚಿವರ ಈ ಹೇಳಿಕೆ ಎಷ್ಟು ಸರಿ, ನಾವು ದೂರು ಪತ್ರ ನೀಡುವ ಚಳುವಳಿ ಪ್ರಾರಂಭಿಸುತ್ತೇವೆ ನೋಡೋಣ ಸಚಿವರು ಎಷ್ಟು ಜನರಿಗೆ ಹೊಡೆಯುತ್ತಾರೆ ಎಂಬ ಸವಾಲನ್ನು ಹಾಕಿದ್ದಾರೆ.

ತಾಲೂಕಿನ ದಾಬಕಾ ಗ್ರಾಮದಲ್ಲಿ 04/06/2021 ರಂದು ನಡೆದ ಗ್ರಾಮ ಸಂಚಾರಕ್ಕಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರ ಜೊತೆಯಲ್ಲಿದ್ದ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಅವರು ಸಹ ಜನ ದೂರು ನೇರವಾಗಿ ಡಿಸಿ ಹಾಗೂ ಸಿಇಒ ಗಳಿಗೆ ಕೊಡುತ್ತಾರೆ ಎಂದು ಸಚಿವರಿಗೆ ಹೇಳುತ್ತಾರೆ, ಡಿಸಿ ಅವರಿಗೆ ದೂರು ನೀಡುವುದು ಅಪರಾಧವೇ? ಸಚಿವರು ಸರ್ವಾಧಿಕಾರಿ ಧೋರಣೆಯನ್ನು ತರುತ್ತಿದ್ದಾರೆ, ಅಧಿಕಾರಿಗಳು ಸಚಿವರ ತಾಳಕ್ಕೆ ಕುಣಿಯುತಿದ್ದಾರೆ ಎಂದು ಆಗ್ರಹಿಸಿದರು. ಕೂಡಲೇ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿದಿಗಿಳಿದು ಹೋರಾಟ ನಡೆಸಲಾಗುವುದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ದತ್ತಾತ್ರಿ ಬಾಪುರೆ, ಪ್ರ.ಕಾರ್ಯದರ್ಶಿ ಶರಣಪ್ಪ ಪಾಟೀಲ, ಶಂಕರ ಪಾಟೀಲ, ಬಾಲಾಜಿ ಕಾಸಲೆ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.