ಸಚಿವ ಪ್ರಭು ಚವ್ಹಾಣ್ ಅವರಿಂದ ನಾಲ್ದೇರಾ ಪುಸ್ತಕ ಬಿಡುಗಡೆ

ಬೀದರ:ನ.5: ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಶಿವಕುಮಾರ ಕಟ್ಟೆ ಅವರ ‘ನಾಲ್ದೇರಾ’ ಕೃತಿಯನ್ನು ನಗರದ ಕೃಷಿ ಕಾಲೋನಿಯಲ್ಲಿರುವ ನಿವಾಸದಲ್ಲಿ ನ.4ರಂದು ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಶಿವಕುಮಾರ ಕಟ್ಟೆ ಅವರು ಉತ್ತಮ ಸಾಹಿತಿಯಾಗಿದ್ದು, ಒಳ್ಳೆಯ ಗೃಂಥಗಳನ್ನು ಬರೆದಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ನಾಲ್ದೇರಾ ಎಂಬ ಪುಸ್ತಕದಲ್ಲಿ ಸುಂದರವಾಗಿ ಹಂಚಿಕೊಂಡಿದ್ದಾರೆ. ಸಾಕಷ್ಟು ಮಾಹಿತಿ ಹೊಂದಿರುವ ಈ ಪುಸ್ತಕವನ್ನು ಎಲ್ಲರೂ ಓದಬೇಕು. ಪುಸ್ತಕವನ್ನು ಖರೀದಿಸಿ ಓದುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಬೆಳೆಯಬೇಕಿದೆ. ಸ್ಥಳೀಯ ಸಾಹಿತಿಗಳ ಬೆಳವಣಿಗೆಗೆ ಕೈಲಾದಷ್ಟು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಅಲ್ಲದೇ ಸ್ಥಳದಲ್ಲೇ ಪುಸ್ತಕವನ್ನು ಖರೀದಿಸುವ ಮೂಲಕ ಪುಸ್ತಕಗಳನ್ನು ಖರೀದಿಸಿ ಓದುವ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಅವರು ಪ್ರಾಸ್ತಾವಿಕ ಮಾತನಾಡಿ, ತಾವು ಉತ್ತರ ಹಾಗೂ ಪೂರ್ವ ಭಾರತದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಗಮನಿಸಿರುವ ಅಂಶಗಳು ಮತ್ತು ಹೊಸ ಅನುಭವಗಳನ್ನು ನಾಲ್ದೇರಾ ಕೃತಿಯ ಮೂಲಕ ತಿಳಿಸಿದ್ದೇನೆ. ಸಚಿವರು ಹಿಂದೆ ಘೋಷಿಸಿದಂತೆ ಸ್ಥಳೀಯ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ. ಅವರ ಹೆಸರಿನ ಪ್ರಕಾಶನವಾದ `ಪ್ರಭು’ ಪ್ರಕಾಶನದ ಮೂಲಕ ಈ ಪುಸ್ತಕ ಮುದ್ರಣಗೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ, ಮುಖಂಡರಾದ ಅಶೋಕ ಹೊಕ್ರಾಣೆ, ಶಶಿ ಹೊಸಳ್ಳಿ, ಬಂಡೆಪ್ಪ ಕಂಟೆ, ರೇವಣಸಿದ್ದಪ್ಪ ಜಲಾದೆ, ಗುರುನಾಥ ರಾಜಗೀರಾ, ಪ್ರಕಾಶ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಸಾಹಿತಿಗಳಾದ ಡಾ.ಸಂಜೀವಕುಮಾರ ಅತಿವಾಳೆ, ರಮೇಶ ಬಿರಾದಾರ, ರಘುನಾಥ ಹಡಪದ, ರಜಿಯಾ ಬಳಬಟ್ಟಿ, ದೆಶಾಂಶ ಹುಡಗಿ, ಬಸವರಾಜ ಬಲ್ಲೂರ, ಸುನೀತಾ ಬಿರಾದಾರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬಕ್ಕಪ್ಪ ನಿರ್ಣೆಕರ್, ಮಲ್ಲಿಕಾರ್ಜುನ.ಬಿ, ರವೀಂದ್ರಕುಮಾರ ಬಡಿಗೇರ, ಚನ್ನಬಸಪ್ಪ ಪಾಟೀಲ್, ಗೌತಮ, ಎಂ.ಡಿ.ವಕೀಲ ಪಟೇಲ್ ಹಾಗೂ ಇತರರು ಉಪಸ್ಥಿತರಿದ್ದರು.
ಬಳಿಕ ಸಚಿವರು, ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ಸಾಹಿತಿ ಸಂಗಮ’ ಕಾರ್ಯಕ್ರಮದಡಿ ಬೀದರ ನಗರದ ವಿವಿಧ ಸಾಹಿತಿಗಳ ಮನೆಗೆ ಭೇಟಿ ನೀಡಿ, ಸಾಹಿತ್ಯ ಕೃತಿಗಳನ್ನು ವಿತರಿಸಿ ಸನ್ಮಾನಿಸಿದರು.