ಸಚಿವ ಪ್ರಭು ಚವ್ಹಾಣ್ ಅವರಿಂದ ನಗರ ಬಸ್ ನಿಲ್ದಾಣಗಳ ಹೆಸರು ಲೋಕಾರ್ಪಣೆ

ಬೀದರ:ನ.5: ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ನಗರದ ಪ್ರಮುಖ ಬಸ್ ತಂಗುದಾಣಗಳಿಗೆ ನಾಮಕರಣ ಮಾಡಲಾಗಿದ್ದ ಹೆಸರುಗಳನ್ನು ಲೋಕಾರ್ಪಣೆ ಮಾಡಿದರು.
ನಗರದ ರಾಣಿ ಚನ್ನಮ್ಮ ವೃತ್ತದ ಬಳಿಯ ನಗರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಬಸ್ ತಂಗುದಾಣ ಹಾಗೂ ಸಿದ್ಧಾರೂಢ ಮಠದ ರಸ್ತೆಯಲ್ಲಿರುವ ಬಸ್ ತಂಗುದಾಣಕ್ಕೆ ಸಿದ್ದಾರೂಢ ಬಸ್‍ನಿಲ್ದಾಣ ಎಂದು ನಾಮಕರಣ ಮಾಡಲಾಗಿದ್ದ ಹೆಸರುಗಳನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಸಚಿವರು ಮಾತನಾಡಿ, ಬೀದರ ನಗರದ ವಿವಿಧ ಕಡೆಗಳಲ್ಲಿ ನಿರ್ಮಿಸಲಾದ ನಗರ ಬಸ್ ನಿಲ್ದಾಣಗಳು ಮತ್ತು ಉದ್ಯಾನವನಗಳಿಗೆ ಕವಿ ಮತ್ತು ದಾರ್ಶನಿಕರ ಹೆಸರಿಡಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ದಿನಗಳ ಬೇಡಿಕೆಯಾಗಿತ್ತು. ಇದೀಗ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಸಹ ಕಾಯಕ ವರ್ಷ ಘೋಷಣೆ ಮಾಡಿದ್ದು, ಇದಕ್ಕೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕನ್ನಡಪರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ್ ಚನ್ನಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬಲ್ಲೂರ, ಶಿವಶಂಕರ ಟೋಕರೆ, ಮುಖಂಡರಾದ ಅಶೋಕ ಹೊಕ್ರಾಣೆ, ಶಶಿ ಹೊಸಳ್ಳಿ, ಬಂಡೆಪ್ಪ ಕಂಟೆ, ರೇವಣಸಿದ್ದಪ್ಪ ಜಲಾದೆ, ಪ್ರಕಾಶ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಸಹಜಾನಂದ ಕಂದಗೂಳೆ, ಬಿ.ಜಿ ಶೆಟಕಾರ, ಸಿದ್ದಾರೂಢ ಕಂದಗೂಳೆ, ರಾಜೇಂದ್ರ ಮಣಗೀರೆ ಹಾಗೂ ಇತರರು ಉಪಸ್ಥಿತರಿದ್ದರು. ನಂತರ ಸಚಿವರು, ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ, ಶಿವಕುಮಾರ ಮಹಾಸ್ವಾಮಿಗಳ ಆಶಿರ್ವಾದ ಪಡೆದರು.