ಸಚಿವ ಪ್ರಭು ಚವ್ಹಾಣ್ ಅವರಿಂದ ರಸ್ತೆ ಕಾಮಗಾರಿ ವೀಕ್ಷಣೆ

ಬೀದರ ನ.4: ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ನವೆಂಬರ್ 3ರಂದು ಜಿಲ್ಲೆಯ ಕೋರೆಕಲ್ ಗ್ರಾಮದ ಹತ್ತಿರ ನಡೆಯುತ್ತಿರುವ ಠಾಣಾಕುಶನೂರ- ದುಡಕನಾಳ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ಇಲ್ಲದಿರುವುದನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ ಸಚಿವರು, ಮೊಬೈಲ್ ಮುಖಾಂತರ ಅಧಿಕಾರಿಗಳನ್ನು ಸಂಪರ್ಕಿಸಿ, ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದಲ್ಲಿ ಕೆಲಸ ಯಾವ ಸ್ವರೂಪದಲ್ಲಿದೆ ಎಂದು ತಿಳಿಯಲು ಸಾಧ್ಯ. ಹಾಗಾಗಿ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ, ಕೆಲಸ ಹೇಗೆ ನಡೆಯುತ್ತಿದೆ ಎನ್ನುವ ಬಗ್ಗೆ ಮಾಹಿತಿ ಪಡೆಯಬೇಕು ಎಂದು ನಿರ್ದೇಶನ ನೀಡಿದರು.
ಠಾಣಾಕುಶನೂರ, ದುಡಕನಾಳ ಗ್ರಾಮಸ್ಥರು ದಿನನಿತ್ಯ ಸಂಚಾರಕ್ಕೆ ಅನಾನುಕೂಲವಾಗುವುದನ್ನು ಗಮನಿಸಿ, ಸುಮಾರು 5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. 5 ಕಿ.ಮೀ ವರೆಗೆ ಇರುವ ಈ ರಸ್ತೆಯು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾಮಗಾರಿ ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ತರಾತುರಿಯಲ್ಲಿ ಕೆಲಸ ಪೂರ್ಣಗೊಳಿಸಿ ವರದಿ ಸಲ್ಲಿಸುವ ಸಾಧ್ಯತೆಗಳಿರುತ್ತವೆ. ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕಾಮಗಾರಿಯಲ್ಲಿ ಯಾವುದೇ ರೀತಿಯ ಲೋಪಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.