ಸಚಿವ ಪ್ರಭು ಚವ್ಹಾಣ್‍ರಿಂದ ಸಡಗರದ ಎಳ್ಳ ಅಮವಾಸ್ಯೆ ಆಚರಣೆ

ಬೀದರ್:ಜ.3: ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರು ಉತ್ತರ ಕರ್ನಾಟಕ ಭಾಗದ ಪ್ರಮುಖ ಹಬ್ಬವಾದ ಎಳ್ಳ ಅಮವಾಸ್ಯೆಯನ್ನು ಸ್ವಗ್ರಾಮ ಬೋಂತಿ ತಾಂಡಾದಲ್ಲಿರುವ ತಮ್ಮ ಹೊಲದಲ್ಲಿ ಭಾನುವಾರ ಸಂಭ್ರಮದಿಂದ ಆಚರಿಸಿದರು.

ಭೂಮಿ ತಾಯಿಗೆ ಪೂಜೆ ನೆರವೇರಿಸಿದ ಸಚಿವರು, ಕುಟುಂಬಸ್ಥರು ಹಾಗೂ ಆತ್ಮೀಯರೊಂದಿಗೆ ಕುಳಿತು ರೊಟ್ಟಿ, ಭಜ್ಜಿ ಹಾಗೂ ಅಂಬಲಿಯ ರುಚಿಯನ್ನು ಸವಿದರು. ಬಳಿಕ ಜುಕಾಲಿಯಾಡಿ ಗಮನ ಸೆಳೆದರು.

ರೈತರು ಮತ್ತು ಭೂಮಿತಾಯಿಯ ನಡುವಿನ ಬಾಂಧವ್ಯವನ್ನು ವೃದ್ಧಿಸಲು ಎಳ್ಳ ಅಮಾವಾಸ್ಯೆ ಹಬ್ಬವನ್ನು ಆಚರಿಸಲಾಗುತ್ತದೆ. ರೈತರು ವರ್ಷವಿಡೀ ಬೆವರು ಹರಿಸಿ ಭೂಮಿ ತಾಯಿಗೆ ಸೇವೆ ಸಲ್ಲಿಸುತ್ತಾರೆ. ಇದಕ್ಕೆ ಪ್ರತಿಯಾಗಿ ರೈತರಿಗೆ ಉತ್ತಮ ಪ್ರತಿಫಲ ಸಿಗುತ್ತದೆ. ಈ ಬಾರಿ ಎಲ್ಲ ಬೆಳೆಗಳು ಉತ್ತಮ ಫಸಲನ್ನು ನೀಡಿ ರೈತರಿಗೆ ಸಂತೋಷ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಪ್ರತೀಕ್ ಚವ್ಹಾಣ, ಅಮಿತ್ ರಾಠೋಡ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಮಾರುತಿ ಚವ್ಹಾಣ, ಕಿರಣ ಪಾಟೀಲ, ಶಿವಕುಮಾರ ಪಾಂಚಾಳ, ಅರವಿಂದ ವಟಗೆ, ಜೈಪಾಲ ರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.

ರೈತರ ಸಂಭ್ರಮದಲ್ಲಿ ಭಾಗಿ: ಬಳಿಕ ಸಚಿವರು ಔರಾದ ತಾಲ್ಲೂಕಿನ ಹಕ್ಯಾಳ, ಖತಗಾಂವ್, ಕಮಲನಗರ, ಹೊಳಸಮುದ್ರ, ಹಲ್ಲಳ್ಳಿ, ಠಾಣಾಕುಶನೂರ ಗ್ರಾಮದ ರೈತರ ಹೊಲಗಳಿಗೆ ತೆರಳಿ, ರೈತರೊಂದಿಗೆ ಎಳ್ಳ ಅಮವಾಸ್ಯೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.