
ಬೀದರ:ಮಾ.13:ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಮಾರ್ಚ್ 12ರಂದು ಔರಾದ ಹಾಗೂ ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು 8.5 ಕೋಟಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮುಧೋಳ(ಬಿ) ಗ್ರಾಮದಲ್ಲಿ 321 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ, ಹಸ್ಸಿಕೇರಾ ತಾಂಡಾದಲ್ಲಿ 13 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ, ಬಸವನವಾಡಿ ತಾಂಡಾದಲ್ಲಿ 25 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ, ಮಮದಾಪುರನಲ್ಲಿ 13 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ 80 ಲಕ್ಷ ಅನುದಾನದ ಜಲ ಜೀವನ ಮಿಷನ್ ಕಾಮಗಾರಿ, ರಾಯಪಳ್ಳಿ ಹಾಗೂ ಮೆಡಪಳ್ಳಿಯಲ್ಲಿ 13 ಲಕ್ಷ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಗುಡಪಳ್ಳಿಯಲ್ಲಿ 116.03 ಲಕ್ಷ, ಚಿಂತಾಮಣಿ ತಾಂಡಾದಲ್ಲಿ 20 ಲಕ್ಷ, ಏಕಲಾರ್ ನಲ್ಲಿ 127.11 ಲಕ್ಷ ಹಾಗೂ ಎಕಲಾರ ತಾಂಡಾದಲ್ಲಿ 88.42 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ, ಬರ್ದಾಪೂರ ಗ್ರಾಮದಲ್ಲಿ 13 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಔರಾದ(ಬಿ) ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಮಕ್ಕಳಿಗೆ ಉತ್ತಮ ಶಾಲೆಗಳು ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವ ದಿಶೆಯಲ್ಲಿ ನಿರಂತರ ಕೆಲಸ ಮಾಡುತ್ತಿದ್ದೇನೆ. ಔರಾದ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಕಲ್ಪಿಸಲು ಕ್ಷೇತ್ರದಾದ್ಯಂತ ಜಲ ಜೀವನ ಮಿಷನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರತಿ ಮನೆಗೆ ನೀರು ಒದಗಿಸಬೇಕು ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ. ಜೆಜೆಎಂ ಕೆಲಸಗಳು ಸರಿಯಾಗಿ ನಡೆಯಬೇಕು. ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುವ ಮೂಲಕ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಅನಾರೋಗ್ಯ ಪೀಡಿತ ವ್ಯಕ್ತಿಗೆ ನೆರವು: ಸಚಿವರು ಪ್ರವಾಸದ ಸಂದರ್ಭದಲ್ಲಿ ಅಲ್ಲಾಪೂರ ಗ್ರಾಮದಲ್ಲಿ ರಾಜಕುಮಾರ ನರಸಿಂಗರಾವ್ ಎಂಬ ವ್ಯಕ್ತಿ ಕೆಲವು ದಿನಗಳಿಂದ ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಗಮನಕ್ಕೆ ತರುತ್ತಿದ್ದಂತೆ ಸಚಿವರು ಯುವಕನ ಮನೆಗೆ ಭೇಟಿ ಆರೋಗ್ಯ ವಿಚಾರಿಸಿದರು. ಉತ್ತಮ ಚಿಕಿತ್ಸೆ ಪಡೆದು ಶೀಘ್ರ ಗುಣಮುಖವಾಗಬೇಕು. ಯಾವುದೇ ಕಾರಣಕ್ಕೂ ಮನೋಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಧೈರ್ಯ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು.
ಇದೇ ವೇಳೆ ಸಚಿವರು ಆತ್ಮಹತ್ಯೆಗೆ ಒಳಗಾದ ರೈತ ಆನಂದರಾವ ಪಾಟೀಲ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧನಸಹಾಯ ಮಾಡಿದರು. ನಂದ್ಯಾಳ ಗ್ರಾಮಕ್ಕೆ ಭೇಟಿ ನೀಡಿದಾಗ, ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮುಖಂಡರಾದ ರಮೇಶ ಪಾಟೀಲ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಭಾಷ ದಾಳಗುಂಡೆ, ಮುಖಂಡರಾದ ಸುರೇಶ ಭೋಸ್ಲೆ, ವಸಂತ ಬಿರಾದಾರ, ಸತೀಷ ಪಾಟೀಲ್, ದೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವಾಜಿರಾವ ಕಾಳೆ, ನಾಗನಾಥ ಚಿಕ್ಲೆ, ರಾಮಶೆಟ್ಟಿ ಪನ್ನಾಳೆ, ಅಶೋಕ ರೆಡ್ಡಿ ಮಮದಾಪೂರ, ರಮೇಶ ಬಿರಾದಾರ, ಪ್ರಕಾಶ ಅಲ್ಮಾಜೆ, ಕೇರಬಾ ಪವಾರ, ಸಂತೋಷ ಪೆÇೀಕಲವಾರ, ಸಚಿನ ರಾಠೋಡ್, ಶರಣಪ್ಪಾ ಪಂಚಾಕ್ಷರಿ, ಹಣಮಂತ ಸುರನಾರ, ರಮೇಶ ಪಾಟೀಲ್, ರಾವಸಾಬ್ ಪಾಟೀಲ ಜಕನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.