ಸಚಿವ ಪ್ರಭು ಚವ್ಹಾಣರಿಂದ ವಿಜಯ ಸಂಕಲ್ಪ ಯಾತ್ರೆಯ ಸಿದ್ಧತೆ ಪರಿಶೀಲನೆ

ಬೀದರ:ಫೆ.27:ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಮಾರ್ಚ್ 3 ರಂದು ಬಸವಕಲ್ಯಾಣದ ಅನುಭವ ಮಂಟಪ ಆವಣದಲ್ಲಿ ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಭಾನುವಾರ ಬಸವಕಲ್ಯಾಣಕ್ಕೆ ತೆರಳಿ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.
ಇದಕ್ಕೂ ಮುನ್ನ ಮುಖಂಡರೊಂದಿಗೆ ಸಭೆ ನಡೆಸಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಮಾಡಿಕೊಂಡಿರುವ ತಯಾರಿಗಳ ಬಗ್ಗೆ ವಿವರಣೆ ಪಡೆದರು. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ವಿಶ್ವಗುರು ಬಸವಣ್ಣನವರು ನಡೆದಾಡಿದ ಪುಣ್ಯಭೂಮಿಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಆಗಮಿಸಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ತೊಡಕುಗಳು ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ಬಸವಕಲ್ಯಾಣ ಶಾಸಕರಾದ ಶರಣು ಸಲಗರ, ಮುಖಂಡರಾದ ಶಿವರಾಜ ಗಂದಗೆ, ಅರಹಂತ ಸಾವಳೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಮಹೇಶ್ವರ ಸ್ವಾಮಿ, ಅಶೋಕ ವಕಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.