ಸಚಿವ ಪೂಜಾರಿ ದಿಢೀರ್ ಭೇಟಿ ಅಂಬೇಡ್ಕರ್ ನಿಗಮದ ಸಿಬ್ಬಂದಿ ಕಕ್ಕಾಬಿಕ್ಕಿ

ಬೆಂಗಳೂರು, ಜು. ೩೦- ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸಪೂಜಾರಿ ಅವರು ಇಂದು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಚಿಕ್ಕಗೋಪುರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಇಂದು ಬೆಳಗ್ಗೆ ದಿಢೀರ್ ಭೇಟಿ ನೀಡಿದ ಸಚಿವ ಕೋಟಾ ಶ್ರೀನಿವಾಸಪೂಜಾರಿ ಅವರು, ಮೊದಲು ಅಧಿಕಾರಿ, ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲಿಸಿ, ಎಲ್ಲರೂ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಿ ಎಂದು ತಾಕೀತು ಮಾಡಿದರು.
ನಂತರ ಸಚಿವರು ನಿಗಮದ ಕಾರ್ಯಕ್ರಮಗಳ ಪ್ರಗತಿಗಳನ್ನು ಪರಿಶೀಲಿಸಿದರು.
ಭೂಒಡತೆನ ಯೋಜನೆಯಲ್ಲಿನ ಗೊಂದಲ ಪರಿಹರಿಸುವ ಬಗ್ಗೆ ಗಂಗಾ ಕಲ್ಯಾಣ ಯೋಜನೆಯ ವಿದ್ಯುದ್ದೀಕರಣಕ್ಕೆ ಶೀಘ್ರ ಕ್ರಮ ವಹಿಸಿ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸುರೇಶ್‌ಕುಮಾರ್ ಅವರಿಗೆ ಸೂಚಿಸಿದರು.
ವಿವಿಧ ಅಭಿವೃದ್ಧಿ ನಿಗಮಗಳ ಕಾರ್ಯವೈಖರಿಯನ್ನು ಖುದ್ಧು ಪರಿಶೀಲಿಸುವ ಜತೆಗೆ ನಿಗಮಗಳ ಕೆಲಸ ಕಾರ್ಯಗಳನ್ನು ಚುರುಕುಗೊಳಿಸುವ ಉದ್ದೇಶದಿಂದ ಈ ದಿಢೀರ್ ಭೇಟಿ ನೀಡಿದ್ದಾಗಿ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ. ಕೆ. ರಾಕೇಶ್‌ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ. ಉದಯ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.