ಸಚಿವ ನಿರಾಣಿ – ಡಾ. ಪ್ರಣವಾನಂದ ಸ್ವಾಮೀಜಿ ಯಶಸ್ವಿ ಸಂಧಾನಈಡಿಗರ ಬೇಡಿಕೆ ಈಡೇರಿಸಲು ಒಂದು ತಿಂಗಳ ಗಡುವು

ಕಲಬುರಗಿ:ಜು.15: ಈಡಿಗ ಸಮಾಜದ ಪ್ರಮುಖ ಬೇಡಿಕೆಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ನಿಗಮವನ್ನು ಕೂಡಲೇ ಘೋಷಿಸಲು ಮುಖ್ಯಮಂತ್ರಿಗಳ ಜೊತೆ ತಕ್ಷಣ ಚರ್ಚಿಸುವುದಲ್ಲದೆ ಎಲ್ಲ ಹೋರಾಟಗಳನ್ನು ಕೈಬಿಟ್ಟು ಒಂದು ತಿಂಗಳೂಳಗೆ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧವಿರುವುದಾಗಿ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ಆರ್ ನಿರಾಣಿ ಭರವಸೆ ನೀಡಿದರು.

ಈಡಿಗರು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ 2 ವರ್ಷಗಳಿಂದ ಸಮುದಾಯದ ಸ್ವಾಮೀಜಿ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದು ಜು. . 13 ರಂದು ಸಂಸದರು ಹಾಗೂ ಶಾಸಕರ ಮನೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಲಾಗಿತ್ತು. ಕಲಬುರಗಿ ನಗರದಲ್ಲಿದ್ದ ಮುರುಗೇಶ್ ನಿರಾಣಿ ಅವರು ಡಾ. ಪ್ರಣವಾನಂದ ಶ್ರೀಗಳನ್ನು ಭೇಟಿ ಮಾಡಿ ಚರ್ಚಿಸಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ನಂತರ ಮಾತನಾಡಿ 70 ಲಕ್ಷಕ್ಕೂ ಅಧಿಕ ಇರುವ ಜನಸಮುದಾಯದ ಬೇಡಿಕೆ ನ್ಯಾಯೋಚಿತವಿದ್ದು ಸಮುದಾಯದ ಜನರು ಬಿಜೆಪಿಯ ಕೈಹಿಡಿದಿದ್ದು ಅವರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಇತರ ಸಮುದಾಯಗಳಿಗೆ ನೀಡಿದ ನಿಗಮದಂತೆ ಈಡಿಗರಿಗೂ ನೀಡಲು ಪ್ರಯತ್ನಿಸಲಾಗುವುದು.

ಉಡುಪಿ – ಮಂಗಳೂರು ಭಾಗದಲ್ಲಿ ಕುಲಕಸುಬು ಮುಂದುವರಿದಿದ್ದು ಈ ಭಾಗದಲ್ಲಿ ತಡೆಮಾಡಿದ ಬಗ್ಗೆ ಚರ್ಚಿಸಲಾಗುವುದು. ಹಿರಿಯ ಸಚಿವರು, ಶಾಸಕರ ಜೊತೆ ತಕ್ಷಣ ಕ್ಯಾಬಿನೆಟ್‍ನಲ್ಲಿ ಮಾತುಕತೆ ನಡೆಸಲಾಗುವುದು. ಪೂಜ್ಯಶ್ರೀಗಳು ಪಾದಯಾತ್ರೆ, ನಿರಶನ ಹೂಡಲು ನಿರ್ಧರಿಸಿದ್ದನ್ನು ಕೈಬಿಡಲು ಕೋರಲಾಗಿದ್ದು 30 ದಿನಗಳ ಕಾಲಾವಕಾಶದಲ್ಲಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಸ್ವಾಮೀಜಿಯವರಿಗೆ ಆಶ್ವಾಸನೆ ನೀಡಿದರು. ಹೋರಾಟ ಮಾಡಿದ ತಕ್ಷಣ ಭರವಸೆ ನೀಡಿ ಸಾಂತ್ವನ ಮಾಡುವುದು ಸರಕಾರದ ಜಾಯಮಾನವಲ್ಲ. ಮುಖ್ಯಮಂತ್ರಿಗಳ ಬದಲಾವಣೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ವಿಳಂಬ ಆಗಿದ್ದು ನಿಜವಾದರೂ ಇನ್ನು ಒಂದು ತಿಂಗಳಲ್ಲಿ ಸ್ವತಃ ಮುಖ್ಯಮಂತ್ರಿಗಳ ಸಮ್ಮುಖದಲ್ಲೆ ಚರ್ಚಿಸಿ ಇತ್ಯರ್ಥಪಡಿಸಲಾಗುವುದು. ಪೂಜ್ಯರು ಮತ್ತು ಸಮುದಾಯದವರು ಪಕ್ಷದ ಜೊತೆಗಿರಬೇಕೆಂದು ಕೇಳಿಕೊಳ್ಳುವುದಾಗಿ ಹೇಳಿದರು.

ಹೋರಾಟ ಸ್ಥಗಿತ ಃ ಡಾ. ಪ್ರಣವಾನಂದ ಶ್ರೀ

ಈಡಿಗರ ಹೋರಾಟದ ತೀವ್ರತೆ ಗಮನಿಸಿ ರಾಜ್ಯದ ಹಿರಿಯ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ್ ನಿರಾಣಿ ಜೊತೆ ನಡೆಸಿದ ಮಾತುಕತೆಯಲ್ಲಿ ಬೇಡಿಕೆ ಈಡೇರಿಕೆ ಭರವಸೆ ದೊರಕಿರುವುದರಿಂದ ಬಸವಕಲ್ಯಾಣ ತಾಲೂಕಿನ ಹೆಂಡದ ಮಾರಯ್ಯ ಧ್ಯಾನ ಸ್ಥಳ ಬೆಟ್ಟದಬಾಲಕುಂದಿಯಿಂದ ಜು. 27 ರಿಂದ ಪ್ರಾರಂಭವಾಗಬೇಕಿದ್ದ ಕಲಬುರಗಿ ವರೆಗಿನ ಪಾದಯಾತ್ರೆ ಹಾಗೂ ಜು. 31 ರಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಸಲು ಉದ್ದೇಶಿದ ಅಮರಣಾಂತ ಉಪವಾಸ ಸರಕಾರದ ಹಾಗೂ ನಿರಾಣಿಯವರ ಮೇಲಿನ ಗೌರವದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು. ಸಮುದಾಯದ ನಾಯಕರನ್ನು ಕರೆಸಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚಿಸಿ ತಕ್ಷಣ ಪರಿಹಾರ ಒದಗಿಸುವುದಾಗಿ ನಿರಾಣಿಯವರು ನೀಡಿದ ಆಶ್ವಾಸನೆಯನ್ನು ನಂಬಿ ಎಲ್ಲಾ ಹೋರಾಟ ರದ್ದು ಮಾಡಲಾಗಿದೆ. ಇದಕ್ಕೆ ಈಡಿಗ ಸಮುದಾಯದ ಜನರು ಸಹಕರಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು. ಸರಕಾರವು ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಮತ್ತೆ ಯಥಾಸ್ಥಿತಿಯಂತೆ ಸಮಾಜ ವಿಜ್ಞಾನದಲ್ಲಿ ಅಳವಡಿಸಲು ಆದೇಶ ನೀಡಿದ್ದಕ್ಕಾಗಿ ಈಡಿಗ- ಬಿಲ್ಲವ ಸೇರಿದಂತೆ 26 ಪಂಗಡಗಳ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಹೋರಾಟ ಸಮಿತಿ ಹರ್ಷ:

ಸಚಿವ ಮುರುಗೇಶ್ ನಿರಾಣಿಯವರು ಕಲಬುರಗಿ ನಗರದಲ್ಲಿ ಈಡಿಗ ಸ್ವಾಮೀಜಿ ಡಾ. ಪ್ರಣವಾನಂದ ಶ್ರೀಗಳ ಜೊತೆ ನಡೆಸಿದ ಸಂಧಾನ ಮಾತುಕತೆಗೆ ಹರ್ಷ ವ್ಯಕ್ತ ಪಡಿಸಿದೆ.

ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ವಿ. ಗುತ್ತೇದಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ, ಗೌರವಾಧ್ಯಕ್ಷರಾದ ಅಶೋಕ ಗುತ್ತೇದಾರ ಬಡವಾಳ, ಆರ್ಯ ಈಡಿಗ ಸಮಾಜದ ಜಿಲ್ಲಾಧಕ್ಷರಾದ ರಾಜೇಶ್ ಗುತ್ತೇದಾರ ಹೇಳಿಕೆ ನೀಡಿ ಸಚಿವರು ಕಾಳಜಿಪೂರ್ವಕವಾಗಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ನ್ಯಾಯಪರ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಲ್ಲದೆ ನಿಗಮ ರಚನೆ ತಕ್ಷಣ ಘೋಷಣೆ ಹಾಗೂ ಚರ್ಚಿಸಿದ ನಂತರ ಕುಲಕಸುಬು ಸೇಂದಿ ಇಳಿಕೆಗೆ ಕ್ರಮ ಕೈಗೂಳ್ಳುವುದಾಗಿ ತಿಳಿಸಿರುವುದು ಸಂತಸ ತಂದಿದೆ. ನಿರಂತರ ಹೋರಾಟ ನಡೆಯುತ್ತಿದ್ದರೂ ಶಾಸಕರು, ಸಂಸದರೂ, ಸಮುದಾಯದ ಸಚಿವರು ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡದೆ ಕಡೆಗಣಿಸಿರುವುದು ಅಕ್ಷ್ಯಮ್ಯ ಅಪರಾಧ. ಸಚಿವ ಮುರುಗೇಶ್ ನಿರಾಣಿಯವರು ಸ್ವತಃ ಸ್ವಾಮೀಜಿಯವರ ಬಳಿಗೆ ಬಂದು ಬಗೆಹರಿಸಲು ಒಂದು ತಿಂಗಳ ಕಾಲಾವಕಾಶ ಕೇಳಿರುವುದು ಅವರಿಗೆ ಈಡಿಗ ಸಮುದಾಯದ ಜನರ ಮೇಲೆ ಇರುವ ಪ್ರೀತಿಗೆ ಸಾಕ್ಷಿ ಎಂದು ಸತೀಶ್ ಗುತ್ತೇದಾರ ತಿಳಿಸಿದರು. ಕಾದು ನೋಡುವ ನೀತಿಯನ್ನು ಅನುಸರಿಸಿ ಮುಂದೆ ಕಾರ್ಯೋನ್ಮುಖರಾಗಲಿದ್ದೇವೆ ಎಂದು ಸಮಿತಿ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.