ಸಚಿವ ಡಾ.ಎಚ್.ಸಿ ಮಹಾದೇವಪ್ಪ ಸಂಸತ್ತಿಗೆ ಸ್ಪರ್ಧಿಸದಿರಲು ಆಗ್ರಹ

ಕಲಬುರಗಿ,ಫೆ.5: ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದೆ.
ಸಮಿತಿಯ ಮುಖಂಡ ಸುನೀಲ್ ಮಾನಪಡೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್ ಸಿ ಮಹಾದೇವಪ್ಪಅವರು ಈಗಾಗಲೆ ನಾಲ್ಕು ಭಾರಿ ಸಚಿವರಾಗಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿ ಜಾರಿ ಮಾಡುವ ಮೂಲಕ ಇಡೀ ರಾಜ್ಯದ ಶೋಷಿತ ಸಮುದಾಯಗಳನ್ನು ಮುನ್ನೆಲೆಗೆ ತರುವ ಮತ್ತು ಅವುಗಳನ್ನು ಅನುಷ್ಠಾನಕ್ಕೆ ತಂದು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಯಶಸ್ಸು ಮತ್ತು ಶಕ್ತಿಯನ್ನು ತಂದುಕೊಡುವ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಇಂದು ದಲಿತ ಹಿಂದುಳಿದ ಸಮುದಾಯಗಳನ್ನು ರಾಜ್ಯಾದ್ಯಂತ ಒಗ್ಗೂಡಿಸಿ ಅವರಿಗೆ ಅರಿವು, ಸಾಮಾಜಿಕ ನ್ಯಾಯ ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ ಡಾ. ಹೆಚ್ ಸಿ. ಮಹಾದೇವಪ್ಪ ಅವರನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಕೇಂದ್ರ ಸಮಿತಿಗಳು ರಾಷ್ಟ್ರರ ರಾಜಕಾರಣಕ್ಕೆ ತೆಗೆದುಕೊಳ್ಳುವ ಮನಸ್ಥಿತಿಯಿಂದ ಹೊರ ಬರಬೇಕು ಎಂದು ಆಗ್ರಹಿಸಿದರು.
ಡಾ.ಹೆಚ್ ಸಿ ಮಹದೇವಪ್ಪ ಅವರನ್ನು ಈಗ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿ ಹೊರದಬ್ಬುವ ವ್ಯವಸ್ಥಿತ ಪಿತೂರಿ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದೆ.ಇಂತಹ ದಲಿತ ವಿರೋಧಿ ರಾಜಕೀಯ ಪಿತೂರಿ ಖಂಡನೀಯ. ಈ ಕುತಂತ್ರದ ವಿರುದ್ಧ ರಾಜ್ಯದಾದ್ಯಂತ ಎಲ್ಲ ದಲಿತ ಹಿಂದುಳಿದ ಸಮುದಾಯದ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮೀಕಾಂತ ಸಿಂಗೆ,ಸುಭಾಷ ಕೋರೆ,ಭೀಮಶಾ ಖನ್ನಾ,ಕೈಲಾಶ ದೋಣಿ,ರಾಜಕುಮಾರ ಕೋರಳ್ಳಿ,ಬಾಬು ಪರಸೋನ್,ಸಿದ್ದಲಿಂಗ ಪಾಳಾ ಇದ್ದರು