ಸಚಿವ ಡಾ.ಎಚ್.ಸಿ.ಮಹದೇವಪ್ಪ ರಾಜ್ಯ ರಾಜಕಾರಣದಲ್ಲಿರಲಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಫೆ.7 :- ರಾಜ್ಯದಲ್ಲಿ ಶೋಷಿತರ ವರ್ಗದ ಕಲ್ಯಾಣಕ್ಕಾಗಿ ಉತ್ತಮ ಕೆಲಸ ಮಾಡುತ್ತಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಕೇಂದ್ರದ ಲೋಕಸಭೆಗೆ  ಕಳುಹಿಸದೇ, ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಎಐಸಿಸಿ ಹಾಗೂ ಕೆಪಿಸಿಸಿ ವರಿಷ್ಠರು ಅವಕಾಶ ಮಾಡಿಕೊಡಬೇಕೆಂದು ಛಲವಾದಿ ಮಹಾಸಭಾದ ಕೂಡ್ಲಿಗಿ  ತಾಲೂಕು ಅಧ್ಯಕ್ಷ ಮೊರಬನಹಳ್ಳಿ ಸಿ.ಮಾರಪ್ಪ ಒತ್ತಾಯಿಸಿದರು.
ಅವರು ಮಂಗಳವಾರ ತಾಲೂಕಿನ ಕಾನಹೊಸಹಳ್ಳಿಯಲ್ಲಿ ಪತ್ರಕರ್ತರೊಂದಿಗೆ  ಮಾತನಾಡುತ್ತಾ  ಸಮುದಾಯದ ಡಾ  ಹೆಚ್ ಸಿ ಮಹದೇವಪ್ಪ ಅವರು  ರಾಜ್ಯ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸುವ ಮೂಲಕ ರಾಜ್ಯದ ಶೋಷಿತರ ಅಭಿವೃದ್ಧಿಗೆ ಒತ್ತು ನೀಡಿದ್ದಾರಲ್ಲದೆ, ರಾಜ್ಯದ ದಲಿತ, ಹಿಂದುಳಿದ ವರ್ಗಗಳ  ಸೇರಿ ಎಲ್ಲಾ ಸಮುದಾಯಗಳ ಜತೆ ಉತ್ತಮ ಬಾಂಧವ್ಯ ಹೊಂದಿರುವ ಡಾ.ಎಚ್.ಸಿ.ಮಹದೇವಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಇರುಬೇಕು. ರಾಜಕೀಯ ತಂತ್ರಗಾರಿಕೆ ಮಾಡದೆ  ಅವರನ್ನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೇಂದ್ರಕ್ಕೆ ಕಳಿಸಬಾರದು.ಹಾಗೇನಾದರೂ  ಒಂದು ವೇಳೆ ಅಂಥ ಪ್ರಯತ್ನಕ್ಕೆ ಕಾಂಗ್ರೆಸ್ ವರಿಷ್ಠರು ಮುಂದಾದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ದಲಿತರ ಮತಗಳು ಛಿದ್ರವಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೂ ಕಾರಣವಾಗಬಹುದು. ಹಾಗಾಗಿ, ಯಾವುದೇ ಕಾರಣಕ್ಕೂ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಕೇಂದ್ರಕ್ಕೆ ಕಳಿಸುವ ನಿರ್ಧಾರದಿಂದ ವರಿಷ್ಠರು ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ತಾಲೂಕು ಪ್ರಧಾನ ಕಾರ್ಯದರ್ಶಿ ಆಲೂರು ಲೋಕೇಶ್, ಖಜಾಂಚಿ ನರಸಿಂಹನಗಿರಿ ಸಿ.ಪ್ರಕಾಶ್, ಪದಾಧಿಕಾರಿಗಳಾದ ಇಮಡಾಪುರ ಸಿ.ಅಶ್ವತ್ಥ, ಎ.ಇ.ರಾಮಾಂಜನಿ, ಸಿ.ಈರಣ್ಣ, ಗುಂಡುಮುಣುಗು ಸಿದ್ದಪ್ಪ,  ಸೇರಿ ಇತರರಿದ್ದರು.