ಸಚಿವ ಡಾ.ಎಂ.ಸಿ.ಸುಧಾಕರ್ ಕೈವಾರ ಭೇಟಿ

ಕೋಲಾರ, ಮೇ ೨೯- ಕರ್ನಾಟಕ ಸರ್ಕಾರದ ನೂತನ ಸಚಿವರಾದ ಡಾ.ಎಂ.ಸಿ.ಸುಧಾಕರ್ ರವರು ಇಂದು ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ನೂತನ ಸಚಿವರಿಗೆ ಶ್ರೀಮಠದ ವತಿಯಿಂದ ಪೂರ್ಣಕುಂಭ ಸ್ವಾಗತವನ್ನು ಕೋರಲಾಯಿತು. ಅಷ್ಟೋತ್ತರ ಸಹಿತ ಮಂಗಳಾರತಿಯನ್ನು ಬೆಳಗಲಾಯಿತು. ನೂತನ ಸಚಿವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಕೈವಾರ ಮಠ ಟ್ರಸ್ಟ್ ಸಮಿತಿಯ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿಗಳಾದ ಆರ್.ಪಿ.ಎಂ.ಸತ್ಯನಾರಾಯಣ್, ಸಂಕೀರ್ತನಾ ಯೋಜನೆಯ ಸಂಚಾಲಕರಾದ ಬಾಲಕೃಷ್ಣ ಭಾಗವತರ್, ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್ ಹಾಗೂ ಅಪಾರ ಸಂಖ್ಯೆಯಲ್ಲಿ ಸಚಿವರ ಬೆಂಬಲಿಗರು ಉಪಸ್ಥಿತರಿದ್ದರು. ದೇವಾಲಯದ ಪ್ರಾಂಗಣದಲ್ಲಿ ನೂತನ ಸಚಿವರು ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಕಾರ್ಯಕರ್ತರು ೧೦೧ ತೆಂಗಿನಕಾಯಿ ಹೊಡೆದು ಹರಿಕೆ ತೀರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಎನ್.ಎಂ.ನಾಗರಾಜ್ ರವರು ನೂತನ ಸಚಿವರಿಗೆ ಶುಭಕೋರಿದರು. ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿಗಳಾದ ಕುಶಾಲ್‌ಚೌಕ್ಸೆ ಶುಭಕೋರಿದರು.