ಸಚಿವ ಡಾ.ಎಂ.ಬಿ.ಪಾಟೀಲರಿಂದಶ್ರೀ ಸಿದ್ದೇಶ್ವರ ಸ್ವಾಮಿಜಿ ಸ್ಮರಣಾರ್ಥ ಉದ್ಯಾನವನ ಉದ್ಘಾಟನೆ

ವಿಜಯಪುರ, ಮಾ.4: ವಿಜಯಪುರ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಸ್ಮರಣಾರ್ಥ ಅಭಿವೃದ್ದಿಪಡಿಸಲಾದ ಉದ್ಯಾನವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರು ಉದ್ಘಾಟಿಸಿದರು.
ಭಾನುವಾರ ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಉದ್ಯಾನವನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, 2.5 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಈ ಉದ್ಯಾನವನದಲ್ಲಿ ಹುಲ್ಲು ಹಾಸು, ಅಲಂಕಾರಿಕ ಬದು, ನೆಲಹಾಸು, ಗಿಡಗಳು, ಮಕ್ಕಳ ಆಟಿಕೆ ಸಾಮಗ್ರಿಗಳು, ಆಸನಗಳು, ನಾಮಫಲಕಗಳನ್ನು ಅಳವಡಿಸಿ ಸುಂದರ ಉದ್ಯಾನವನ ಅಭಿವೃದ್ದಿಪಡಿಸಲಾಗಿದ್ದು, ಸಾರ್ವಜನಿಕರು ಹಾಗೂ ಜಿಲ್ಲಾ ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಅತ್ಯುಪಯುಕ್ತವಾಗಲಿದ್ದು, ಸಾರ್ವಜನಿಕರು ಉದ್ಯಾನವನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಹಾಪೌರರಾದ ಮಹೇಜಬಿನ್ ಹೊರ್ತಿ ಉಪಮಹಾಪೌರರಾದ ದಿನೇಶ ಹಳ್ಳಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಆರ್.ಸಿ.ಎಚ್. ಡಾ.ಕೆ.ಡಿ.ಗುಂಡಬಾವಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.