ಸಚಿವ ಜ್ಞಾನೇಂದ್ರ ರಾಜೀನಾಮೆಗೆ ಸಿದ್ದು ಆಗ್ರಹ

ಮೈಸೂರು,ಜು.೨೯:- ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ಸತ್ತಿದೆ. ಸರ್ಕಾರಕ್ಕೆ ಯಾರನ್ನೂ ಕೂಡ ರಕ್ಷಣೆ ಮಾಡಲು ಆಗುತ್ತಿಲ್ಲ. ಕಾನೂನಿನ ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಬಸವರಾಜ ಬೊಮ್ಮಾಯಿ ದುರ್ಬಲ ಮುಖ್ಯಮಂತ್ರಿ, ಗೃಹಸಚಿವರು ಮತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದರ ಹೊಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೊರಬೇಕು. ಗೃಹಸಚಿವರು, ಮುಖ್ಯಮಂತ್ರಿಗಳು ಮಂತ್ರಿಗಳಾಗಿ ಮುಂದುವರಿಯಲು ಯಾವುದೇ ಅರ್ಹತೆ ಇಲ್ಲ. ರಾಜೀನಾಮೆ ಕೊಡಬೇಕು. ಅನೇಕ ಸಲ ಹೇಳಿದ್ದೇನೆ. ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಒಳ್ಳೆಯದು. ಜನರಿಗೆ ರಕ್ಷಣೆ ಇಲ್ಲ, ಕಾನೂನಿನ ಸುವ್ಯವಸ್ಥೆ ಇಲ್ಲ. ಎಲ್ಲರೂ ಭಯ, ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವರಾಜ ಬೊಮ್ಮಾಯಿ ದುರ್ಬಲ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದರು.
ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಇದು ಮುಖ್ಯಮಂತ್ರಿ, ಗೃಹ ಸಚಿವರ ವೈಫಲ್ಯ. ರಾಜ್ಯದಲ್ಲಿ ಸರ್ಕಾರವೇ ಇಲ್ಲ, ಸರ್ಕಾರ ಸತ್ತು ಹೋಗಿದೆ.ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಖ್ಯಮಂತ್ರಿ ಮಂಗಳೂರಿನಲ್ಲಿ ಇದ್ದಾಗ ಕೊಲೆ ಆಗಿದೆ. ಅಂದರೆ ಇಂಟಲಿಜೆನ್ಸ್ ವೈಫಲ್ಯ ಅಲ್ವ? ಇದು ಸರ್ಕಾರ, ಸಿಎಂ, ಗೃಹ ಸಚಿವರ ವೈಫಲ್ಯ ಅಲ್ವ? ಜನ ಮನೆಯಿಂದ ಆಚೆ ಬರಲು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ.ಅಪರಾಧಿಗಳನ್ನು ಪತ್ತೆ ಹಚ್ಚಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಜನರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯುತ್ತಿದ್ದೆವು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಅಂದ್ರೆ ಈಗಿನ ಸರ್ಕಾರಕ್ಕೆ ಕೊಳೆತ ಮೊಟ್ಟೆ, ಹೊಡೆಯಬೇಕಾ? ಒಬ್ಬ ಸಂಸದನಾಗಿ ಎಂತಹ ಬೇಜವಾಬ್ದಾರಿ ಹೇಳಿಕೆ ಕೊಡ್ತಾರೆ ನೋಡಿ ಎಂದರು.