ಸಚಿವ ಜಾರಕಿಹೊಳಿಯವರ ಸುಳ್ಳು ಆಪಾದನೆಯಿಂದ ಆಘಾತ: ಆಪಾದನೆ ಕೂಡಲೇ ಹಿಂಪಡೆಯಲುಶಾಸಕ ಲಕ್ಷ್ಮಣ ಸವದಿ ಬೆಂಬಲಿಗರಿಂದ ಆಗ್ರಹ

Oplus_0

ಅಥಣಿ :ಜೂ.9: ಚಿಕ್ಕೋಡಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಥಣಿ ಮತಕ್ಷೇತ್ರದಿಂದ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿರುವದಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾಗಿರುವ ಸತೀಶಣ್ಣಾ ಜಾರಕಿಹೊಳಿಯವರು ಯಾರದೋ ಚಾಡಿಕೋರರ ಮಾತು ಕೇಳಿ ಮೂಲ ಕಾಂಗ್ರೆಸ್ಸಿಗರು ಮತ್ತು ಬಿಜೆಪಿಯಿಂದ ಬಂದ ಕಾಂಗ್ರೆಸಿಗರು ಎಂಬ ಭೇದ ಭಾವ ಸೃಷ್ಟಿಸಿ ಶಾಸಕ ಲಕ್ಷ್ಮಣ ಸವದಿ ಅವರ ಬೆಂಬಲಿಗರ ಮೇಲೆ ಆಪಾದನೆ ಮಾಡುವುದು ಸರಿಯಲ್ಲ, ಸಚಿವರು ಮಾಡುತ್ತಿರುವ ಆಪಾದನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಶಿವು ಗುಡ್ಡಾಪುರ ಒತ್ತಾಯಿಸಿದರು.
ಅವರು ಶನಿವಾರ ಅಥಣಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಲಿಂಗಾಯತರು ಪ್ರಾಭಲ್ಯ ಇರುವ ಅಥಣಿ ಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಮತ್ತು ಚುನಾವಣಾ ಪೂರ್ವದಲ್ಲಿ ಜಿಲ್ಹಾ ಮಟ್ಟದ ಹಾಲುಮತದ ಸಮಾವೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹಾಲು ಮತದ ಸಮಾಜಕ್ಕೆ ಟಿಕೇಟ್ ಕೊಡಿಸುವುದಾಗಿ ಹೇಳಿ, ಟಿಕೆಟ್ ತಪ್ಪಿಸಿದ್ದರಿಂದ ಹಿನ್ನಡೆ ಉಂಟಾಗಿದೆಯೇ ಹೊರತು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿಲ್ಲ ಎಂದು ಸಚಿವರಿಗೆ ಯಾರು ತಪ್ಪು ಕಲ್ಪನೆ ನೀಡಿದ್ದಾರೆ. ಅಥಣಿ ಕಾಂಗ್ರೆಸ್ ಮುಖಂಡರಲ್ಲಿ ಮೊದಲಿನಿಂದಲೂ ಈ ರೀತಿ ಚಾಡಿ ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಇದ್ದಾರೆ. ಸಚಿವರು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಚುನಾವಣೆಯಲ್ಲಿ ಟಿಕೇಟ್ ಪಕ್ಕಾ ಆದ ದಿನದಿಂದಲೂ ನಾನು ಅನೇಕ ಬಾರಿ ಹೇಳಿದರೂ ಕೂಡ ಲಿಂಗಾಯತರನ್ನು ನಿರ್ಲಕ್ಷಿಸುತ್ತಲೇ ಬಂದರು. ಆದರೂ ಕೂಡ ಎಲ್ಲ ಲಿಂಗಾಯತರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದರು. ಆದ್ರೂ ಕೊನೆವರೆಗೂ ಲಿಂಗಾಯತರಿಗೆ ಪ್ರಾಶಸ್ತ್ಯ ನೀಡದೇ ಇರುವುದು ಮತ್ತು ಚುನಾವಣೆಗೆ ಮೊದಲು ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಹಾಲುಮತ ಸಮಾಜಕ್ಕೆ ಬಿಟ್ಟುಕೊಡುವುದಾಗಿ ಸಚಿವ ಸತೀಶ ಜಾರಕಿಹೊಳಿ ಘೋಷಿಸಿದ್ದರು. ಆದರೆ ಕೊನೆ ಸಮಯದಲ್ಲಿ ತಮ್ಮ ಮಗಳಿಗೆ ಟಿಕೇಟ್ ಗಿಟ್ಟಿಸಿಕೊಂಡರು. ಇದರಿಂದ ಕ್ಷೇತ್ರದಲ್ಲಿ ನಾವು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಹಾಲು ಮತ ಸಮಾಜದವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಇದಲ್ಲದೆ ಮತಕ್ಷೇತ್ರದಲ್ಲಿ ಉಸ್ತುವಾರಿ ವಹಿಸಿದ್ದ ಮುಖಂಡರು ಯಾವ ಮುಖಂಡರ ಮಾತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮದೇ ಆದ ದಾರಿಯಲ್ಲಿ ಸಾಗಿದರು. ನಮ್ಮೆಲ್ಲರಿಗೆ ಮಾರ್ಗದರ್ಶಕರು ಹಾಗೂ ಪಕ್ಷದ ಹಿರಿಯ ನಾಯಕರಾದ ಸಚಿವರು ಕೂಡ ಸ್ಥಳೀಯ ಶಾಸಕ ಲಕ್ಷ್ಮಣ ಸವದಿ ಅವರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಬಂದು ಪ್ರಚಾರ ಮಾಡಿರುವುದು ಇಲ್ಲಿನ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಮುಜುಗರ ಉಂಟುಮಾಡಿದೆ. ಮತಕ್ಷೇತ್ರದಲ್ಲಿ ಹೊಸಬರು ಹಳಬರು ಎಂಬ ಭೇದಭಾವವಿಲ್ಲದೆ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಪ್ರಚಾರ ನಡೆಸುತ್ತಿದ್ದರೂ ಸಚಿವರು ತಮ್ಮ ಕ್ಷೇತ್ರದ ಜನರನ್ನ ಮತ್ತು ಸಕ್ಕರೆ ಕಾರ್ಖಾನೆಯ ಸಿಬ್ಬಂದಿಯನ್ನು ಕರೆ ತಂದು ಪ್ರಚಾರ ನಡೆಸಿದ್ದಾರೆ. ಹೀಗಾಗಿ ಸ್ಥಳೀಯ ಕೆಲವು ಕಾರ್ಯಕರ್ತರು ನಾವು ಮಾಡುವ ಕೆಲಸದಲ್ಲಿ ಇವರಿಗೆ ವಿಶ್ವಾಸವಿಲ್ಲವೆಂದು ಮೌನವಹಿಸಿದ್ದು, ಇಂತಹ ಅನೇಕ ಕಾರಣಗಳಿಂದಲೂ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿರಬಹುದು ಎಂದ ಅವರು ಚುನಾವಣೆಯಲ್ಲಿ ಮೂಲ ಮತ್ತು ಬಿಜೆಪಿ ಯಿಂದ ವಲಸೆ ಬಂದವರು ಎನ್ನುವ ಭೇದ ಭಾವ ಇಲ್ಲದೆ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಆದರೆ ಸಚಿವರ ಆಪಾದನೆ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರ ಉಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಪಕ್ಷವನ್ನ ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ಹೊಸಬರು ಮತ್ತು ಹಳಬರು ಎಂಬ ಭೇದ ಭಾವ ಮಾಡದೆ ಒಗ್ಗೂಡಿಸುವ ಪ್ರಯತ್ನ ವಾಗಬೇಕು ಎಂದು ಹೇಳಿದರು.
ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನ್ಯಾಯವಾದಿ ಅಮೋಘ .ಖೊಬ್ರಿ ಮಾತನಾಡಿ, ಚುನಾವಣೆ ನಿರ್ವಹಿಸಲು ಸತೀಶ ಜಾರಕಿಹೊಳಿ ಮಾಲಿಕತ್ವದ ಕಾರಖಾನೆಯ ಸಿಬ್ಬಂದಿಗಳನ್ನು ಎಲ್ಲ ಬೂತಗಳಲ್ಲಿ ನೇಮಕ ಮಾಡಿದ್ದರು. ಹಾಗೆನಿದ್ದರೆ ನಿಮ್ಮ ಸಿಬ್ಬಂದಿಗಳು ನಿಮ್ಮ ಗಮನಕ್ಕೆ ತರಬಹುದಿತ್ತು ಆದರೂ ಸಚಿವರು ಯಾರದೋ ಮಾತು ಕೇಳಿಯೋ ಅಥವಾ ತಾವೇ ಸಂಶಯ ಪಟ್ಟು ಹಗಲಿರಳು ದುಡಿದ ಕಾರ್ಯಕರ್ತರಿಗೆ ನೋವಾಗುವಂತೆ ಮಾಡಿದ್ದಾರೆ ಎಂದ ಅವರು ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮ ಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆಗಳನ್ನು ಕೊಡುವ ಮೂಲಕ ಪಕ್ಷದ ಸಂಘಟನೆಗೆ ಹಿನ್ನಡೆ ಉಂಟು ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾವು ಗ್ಯಾರೆಂಟಿ ಕಾಡ್ರ್ಗಳನ್ನು ಮನೆಮನೆಗೆ ತಲುಪಿಸಿದರೂ ಕೂಡ ಸಚಿವರಿಗೆ ಫೆÇೀನ್ ಮಾಡಿ ಇನ್ನೂ ವಿತರಿಸಿಲ್ಲ ಎಂಬ ತಪ್ಪು ಕಲ್ಪನೆ ನೀಡಿದರು. ಸಚಿವರೇ ನನಗೆ ನೇರವಾಗಿ ಫೆÇೀನ್ ಮಾಡಿ ಈ ವಿಷಯ ಚರ್ಚಿಸಿದಾಗ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ, ಇಲ್ಲಸಲ್ಲದ ಚಾಡಿ ಹೇಳಿ ನಾವು ಕೆಲಸ ಮಾಡುತ್ತಿಲ್ಲ ಎಂದು ತಪ್ಪು ಕಲ್ಪನೆ ನೀಡಿ ತಾವು ಮಾತ್ರ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಬಿಂಬಿಸಿಕೊಂಡಿದ್ದಾರೆ. ಚುನಾವಣೆಯ ಫಲಿತಾಂಶದ ನಂತರ ಅಥಣಿಗೆ ಆಗಮಿಸಿದ ಸಚಿವರು ಬಿಜೆಪಿ ಪರವಾಗಿ ಹೆಚ್ಚಿನ ಮತಗಳು ಬಂದಿರುವ ಹಿನ್ನಲೆಯಲ್ಲಿ ನಮ್ಮ ಮೇಲೆ ಆಪಾದನೆ ಮಾಡುವ ಹೇಳಿಕೆ ನೀಡಿರುವುದು ಸರಿಯಲ್ಲ. ಇಂಥ ಹೇಳಿಕೆಗಳನ್ನು ಕೂಡಲೇ ಹಿಂಪಡೆದು ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯಮಟ್ಟದಲ್ಲಿ ದೊಡ್ಡ ನಾಯಕರಾಗಿರುವ ಜಾರಕಿಹೊಳಿಯವರು ಮತ್ತು ಸವದಿ ಅವರು ಗೆಲ್ಲ ಕಾರ್ಯಕರ್ತರನ್ನ ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡಿದಾಗ ಕಾಂಗ್ರೆಸ್ ಪಕ್ಷವನ್ನ ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ಸಹಕಾರಿಯಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಶಿವಾನಂದ ದಿವಾನಮಳ ಮತ್ತು ಅನಂತ ಬಸರಿಕೋಡಿ ಮಾತನಾಡಿ, ಅಥಣಿ ಮತಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಶಂಕರಾನಂದ ಅವರ ನಂತರ ನಡೆದ ಎಲ್ಲ ಲೋಕಸಭಾ ಚುನಾವಣೆಗಳಲ್ಲಿಯೂ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿದ್ದು, ಈಗಲೂ ಅದೇ ಮುಂದುವರೆದಿದೆ ಎಂದ ಅವರು ಒಂದು ವೇಳೆ ಲಕ್ಷ್ಮಣ ಸವದಿ ಬಹಿರಂಗವಾಗಿ ಬಿಜೆಪಿ ಪರವಾಗಿ ನಿಂತಿದ್ದರೆ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಕನಿಷ್ಠ 50 ರಿಂದ 80 ಸಾವಿರದಷ್ಟು ಹೆಚ್ಚೂವರಿ ಮತಗಳು ಬಿಜೆಪಿಗೆ ಬರುತ್ತಿದ್ದವು. ಅಥಣಿ ಮತಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದಕ್ಕೆ ಹೊಸ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪಾದನೆ ಮಾಡುವುದು ಸರಿಯಲ್ಲ. ಗೋಕಾಕ್ ಮತ್ತು ಅರಬಾವಿ ಮತಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯವೇನು..? ಅಲ್ಲಿ ಏಕೆ ಬಿಜೆಪಿಗೆ ಹೆಚ್ಚಿನ ಮತಗಳು ಬಂದವು ಎಂಬುದನ್ನು ಸಚಿವರು ಉತ್ತರಿಸಬೇಕು ಎಂದರು.
ಪುರಸಭೆ ಸದಸ್ಯ ಸಂತೋಷ ಸಾವಡಕರ, ನ್ಯಾಯವಾದಿ ಡಿ.ಬಿ . ಠಕ್ಕಣ್ಣವರ, ರಾಮನಗೌಡ ಪಾಟೀಲ್. ಶಿದರಾಯ ಯಲ್ಲಡಗಿ, ಅನಂತ ಬಸರಿಖೋಡಿ. ಆಸೀಫ್ ತಾಂಬೋಳಿ, ಸಿ.ಎಸ್.ನೇಮಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ದಿಲೀಪ ಲೋಣಾರೆ, ರಾಜಶೇಖರ ಗುಡೋಡಗಿ, ಕಲ್ಲೇಶ ಮಡ್ಡಿ, ಧುರೀಣರಾದ ಸಿ ಎಸ್ ನೇಮಗೌಡ. ಹಣಮಂತ ಕಾಲವೆ, ನರಸು ಬಡಕಂಬಿ, ಶ್ರೀಶೈಲ ನಾಯಿಕ, ಪ್ರದೀಪ ನಂದಗಾಂವ, ಪ್ರಶಾಂತ ಅಕ್ಕೋಳ. ಶ್ರೀಶೈಲ ಹಳದಮಳ್ಳ. ಅರುಣ ಬಾಸಿಂಗಿ. ರಾಹುಲ್ ನಾಯಿಕ. ಬಸವರಾಜ ಮರನೂರ, ಮಹಾಂತೇಶ ಠಕ್ಕಣ್ಣವರ, ಜಡೇಪ್ಪ ಕುಂಬಾರ ರಮೇಶ ಪಟ್ಟಣ. ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.


ಅಥಣಿ ಮತಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದಕ್ಕೆ ಸಚಿವರು ಹೊಸ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪಾದನೆ ಮಾಡುವುದು ಸರಿಯಲ್ಲ. ಗೋಕಾಕ ಮತ್ತು ಅರಬಾವಿ ಮತಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯವೇನು..? ಅಲ್ಲಿ ಏಕೆ ಬಿಜೆಪಿಗೆ ಹೆಚ್ಚಿನ ಮತಗಳು ಬಂದವು. ಕಾಂಗ್ರೆಸ್ ಪಕ್ಷದ ಸಚಿವರೆ ಇರುವ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದು ಏಕೆ..? ಎಂಬುದನ್ನು ಸಚಿವರೇ ಉತ್ತರಿಸಬೇಕು.

  • ಶಿವಾನಂದ ದಿವಾನಮಳ,
    ಕಾಂಗ್ರೆಸ್ ಮುಖಂಡರು ಅಥಣಿ.