ಸಚಿವ ಚೌವ್ಹಾಣ್ ರಾಜೀನಾಮೆಗೆ ಹರಿ ಆಗ್ರಹ ಪರಿಷತ್‌ನಲ್ಲಿ ಗದ್ದಲ

ಬೆಂಗಳೂರು, ಸೆ. ೧೪- ಉದ್ಯೋಗ ಕೊಡಿಸುವ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿ ಸಚಿವ ಪ್ರಭು ಚೌವ್ಹಾಣ್ ಅವರ ಆಪ್ತ ಸಹಾಯಕನಾಗಿರುವ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವ ಪ್ರತಿಪಕ್ಷ ಬಿ.ಕೆ. ಹರಿಪ್ರಸಾದ್ ಆಗ್ರಹ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲಕ್ಕೆ ಕಾರಣವಾದ ಘಟನೆ ವಿಧಾನ ಪರಿಷತ್ತಿನಲ್ಲಿಂದು ನಡೆಯಿತು.
ಹರಿಪ್ರಸಾದ್ ಆರೋಪಕ್ಕೆ ಸಚಿವರಾದ ಸುನೀಲ್‌ಕುಮಾರ್, ಸಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ, ಬಿಜೆಪಿ ಸದಸ್ಯರಾದ ಪ್ರಾಣೇಶ್, ವೈ.ಎ. ನಾರಾಯಣಸ್ವಾಮಿ ಮತ್ತಿತರ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಅರವಿಂದ ಕುಮಾರ್ ಅರಳಿ ಪ್ರಸ್ತಾಪಿಸಿದ ವಿಷಯ ಸಚಿವರ ರಾಜೀನಾಮೆವರೆಗೆ ಬಂದು ಗದ್ದಲದ ವಾತಾವರಣ ಸೃಷ್ಠಿಯಾಯಿತು.ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಸಚಿವರ ಆಪ್ತ ಸಹಾಯಕ ಹಗರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಆಗ ಸಚಿವ ಸುನೀಲ್‌ಕುಮಾರ್ ಸೇರಿದಂತೆ ಆಡಳಿತ ಪಕ್ಷದ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸಚಿವರು ಏಕೆ ರಾಜೀನಾಮೆ ನೀಡಬೇಕು ಎಂದು ಅವರ ಬೆಂಬಲಕ್ಕೆ ನಿಂತರು.
ಒನ್ ವೇ ನಡವಳಿಕೆ
ಪ್ರಶ್ನೆ ಹಾಕಿದ್ದ ಅರವಿಂದ ಕುಮಾರ್ ಅರಳಿ ಅವರು ಸಭಾಪತಿಗಳ ಪೀಠ ಒನ್ ವೇ ಆಗಿ ನಡೆದುಕೊಳ್ಳಬಾರದು ಎನ್ನುವ ಹೇಳಿಕೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮತ್ತೆ ಗದ್ದಲ, ಕೋಲಾಹಲಕ್ಕೂ ಕಾರಣವಾಯಿತು.
ಸಚಿವ ಪ್ರಭು ಚೌವ್ಹಾಣ್ ಪ್ರಶ್ನೆಗೆ ಉತ್ತರಿಸಿ, ಬಂಧಿತರಾಗಿರುವ ವ್ಯಕ್ತಿ ತಮ್ಮ ಆಪ್ತ ಸಹಾಯಕರಲ್ಲ. ಅದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.ಆದರೂ ಪಟ್ಟು ಬಿಡದ ಅರಳಿ, ಸಚಿವರೇ ತಮ್ಮ ಆಪ್ತ ಸಹಾಯಕ ಎಂದಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ ಎಂದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರು, ಆಪ್ತ ಸಹಾಯಕ ಎನ್ನುವುದಕ್ಕೆ ಏನಾದರೂ ದಾಖಲೆಗಳಿದ್ದರೆ ಕೊಡಿ ಎಂದು ಸದಸ್ಯರಿಗೆ ಸೂಚಿಸಿದರು.ಆಗ ಅಸಮಾಧಾನಗೊಂಡ ಅರವಿಂದಕುಮಾರ್ ಅರಳಿ ಅವರು ಸಭಾಪತಿ ಪೀಠ ಒನ್ ವೇ ರೀತಿ ವರ್ತಿಸಬಾರದು ಎಂದು ಹೇಳಿದರು.
ಇದರಿಂದ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸದಸ್ಯರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಸಚಿವರು ನೀಡಿದ ಉತ್ತರ ತೃಪ್ತಿಯಾಗದಿದ್ದರೆ ಬೇರೆ ರೀತಿಯಲ್ಲಿ ಅರ್ಜಿ ಕೊಡಿ ಚರ್ಚೆ ಮಾಡೋಣ ಎಂದು ಹೇಳಿ, ಬೇರೆ ಪ್ರಶ್ನೆ ಕೈಗೆತ್ತಿಕೊಂಡರು.