
(ಸಂಜೆವಾಣಿ ವಾರ್ತೆ)
ಔರಾದ :ಮಾ.2: ಮನುಷ್ಯ ಎಷ್ಟೇ ಅಧಿಕಾರದಲ್ಲಿ ಇರಲಿ, ಎಷ್ಟೇ ಎತ್ತರಕ್ಕೆ ಬೆಳೆಯಲಿ ತಾನು ಹುಟ್ಟಿದ ಊರು ಕಲಿತ ಶಾಲೆ ಅಲ್ಲಿನ ಜನರ ಪ್ರೀತಿ, ಹುಟ್ಟುರಿನ ಅಭಿಮಾನ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿಯ ರಸ್ತೆಯಲ್ಲಿ ತಮ್ಮ ಸ್ವಂತ ಅನುದಾನದಲ್ಲಿ ನಿರ್ಮಾಣ ಮಾಡುತ್ತಿರುವ ಉದ್ಭವಲಿಂಗ ಶ್ರೀ ಅಮರೇಶ್ವರ ದೇಗುಲದ ಮಹಾದ್ವಾರ ಆಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು ಈ ಮುಂಚೆ ಹಲವು ಬಾರಿ ಅಮರೇಶ್ವರ ಮಹಾದ್ವಾರ ಸಂಸದರ ನಿಧಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದಾಗ, ಬರುವುದಿಲ್ಲ ಎಂದಿದ್ದರು ಅದಕ್ಕಾಗಿ ನಿಮ್ಮೆಲ್ಲರ ಕನಸಿನಂತೆ ಇವತ್ತು ನನ್ನ ಸ್ವಂತ ಅನುದಾನದಲ್ಲಿ ಮಹಾದ್ವಾರ ನಿರ್ಮಾಣ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಶ್ರೀ ಅಮರೇಶ್ವರರ ದಿವ್ಯ ಆಶೀರ್ವಾದ ಸದಾ ನನ್ನ ಮೇಲಿದೆ ನಾನು ಟಿಕೆಟ್ಗಾಗಿ, ಮಂತ್ರಿಗಿರಿಗಾಗಿ ಯಾವತ್ತು ಯಾರಿಗೂ ಲಾಬಿ ಮಾಡಿದನಲ್ಲ ಅಮರೇಶ್ವರ ಆಶಿರ್ವಾದ ನನ್ನ ಮೇಲಿರುವುದರಿಂದ ನಾನು ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ, ಇಲ್ಲಿಯವರೆಗೆ ಯಾವುದೇ ಒಂದು ಕಪ್ಪು ಚುಕ್ಕೆ ಬಾರದಂತೆ ಕೆಲಸ ಮಾಡಿದ್ದೇನೆ ಬೀದರ-ಔರಾದ ಹೆದ್ದಾರಿ, ಬೀದರ-ನಾಂದೇಡ ರೈಲ್ವೆ, ತಾಲೂಕಿನ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಅನೇಕ ಕೆಲಸಗಳಿಗೆ ವೇಗ ಹೆಚ್ಚಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ ಕಲ್ಲಪ್ಪ ಉಪ್ಪೆ ಮಾತನಾಡಿದರು. ಶರಣಪ್ಪ ಪಂಚಾಕ್ಷರಿ, ಬಂಡೆಪ್ಪ ಕಂಟೆ, ಸೂರ್ಯಕಾಂತ ಅಲ್ಮಾಜೆ, ಚಂದ್ರಕಾಂತ ದೇಶಮುಖ, ಅಮರ ಎಡವೆ, ಗುರುನಾಥ ಬುಟ್ಟೆ, ಅಪ್ಪಾರಾವ ಖೂಬಾ, ಅಣೆಪ್ಪಾ ಖಾನಾಪುರೆ, ಜಗದೀಶ ಖೂಬಾ, ಶ್ರೀನಿವಾಸ ಖೂಬಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.