ಸಚಿವ ಎಸ್‌ಟಿಎಸ್ ಕಾರ್ಯ ಮಾದರಿ

ಬೆಂಗಳೂರು,ಮೇ ೨೬- ಕೋವಿಡ್ ೧೯ರ ಸಂದರ್ಭದಲ್ಲಿ ಜನತೆ ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರಿಗೆ ಚಿಕಿತ್ಸೆಯ ಜೊತೆಗೆ ಧೈರ್ಯ ಸಹ ಬೇಕಿದೆ. ಈ ಕೆಲಸವನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮಾಡುತ್ತಿದ್ದು, ತಮ್ಮ ಕ್ಷೇತ್ರದಲ್ಲಿ ಮೃತಪಟ್ಟವರಿಗೆ ೧ ಲಕ್ಷ ರೂಪಾಯಿಯನ್ನು ವೈಯಕ್ತಿಕವಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ. ಅಲ್ಲದೆ, ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ ಎಂದು ಮೈಸೂರಿನ ಸುತ್ತೂರು ಶ್ರೀ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶಿವರಾತ್ರಿದೇಶೀಕೇಂದ್ರ ಮಹಾ ಸ್ವಾಮೀಜಿ ತಿಳಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ೧೯೮ರಲ್ಲಿ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ನೆರವಿನ ಚೆಕ್ ವಿತರಿಸಿ ಮಾತನಾಡಿದ ಅವರು, ಸೋಮಶೇಖರ್ ಅವರು ಸಹಕಾರ ಸಚಿವರಾಗಿ ರಾಜ್ಯದ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅಲ್ಲದೆ, ಇಡೀ ಮೈಸೂರು ಜಿಲ್ಲೆಯಲ್ಲಿ ಅವರು ಸಂಚರಿಸಿ, ಪಿಎಚ್ ಸಿಗಳಿಗೂ ಭೇಟಿ ನೀಡಿ ಆಯಾ ಕ್ಷೇತ್ರದ ಶಾಸಕರು ಮಾಡುವಂತಹ ಕೆಲಸವನ್ನು ಮಾಡುವ ಮೂಲಕ ಮಾದರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಬಂಡೀಪುರ, ನಾಗರಹೊಳೆ ಕಾಡು ಪ್ರದೇಶಗಳಲ್ಲಿರುವ ಸೋಲಿಗರು ಸೇರಿದಂತೆ ಇತರ ಕುಟುಂಬದವರಿಗೆ ಹೇಗೆ ಸುರಕ್ಷಿತವಾಗಿರಬೇಕು ಎಂಬ ನಿಟ್ಟಿನಲ್ಲಿ ಮಾರ್ಗದರ್ಶನವನ್ನು ಕೊಟ್ಟು ಬಂದಿದ್ದಾರೆ. ಈ ಮೂಲಕ ಅಧಿಕಾರಿಗಳಿಗೂ ಮಾಹಿತಿ-ಸೂಚನೆಯನ್ನು ಕೊಟ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಜಗದ್ಗುರು ಶಿವರಾತ್ರಿದೇಶೀಕೇಂದ್ರ ಮಹಾ ಸ್ವಾಮೀಜಿಯವರು ಶ್ಲಾಘನೆ ವ್ಯಕ್ತಪಡಿಸಿದರು.
ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದೇವೆ; ಸಚಿವ ಎಸ್ ಟಿ ಎಸ್ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮಾತನಾಡಿ, ನಾವೀಗ ಕ್ಷೇತ್ರದಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ. ಲಕ್ಷಣಗಳು ಕಂಡು ಬಂದರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ಮನವೊಲಿಸಲು ನಾನೂ ಸಹ ಖುದ್ದು ಮುಂದಾಗಿದ್ದೇನೆ. ಜನರ ಆರೋಗ್ಯ ನಮಗೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದಿದ್ದೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಕೆಲವರು ರೋಗವನ್ನು ಹೇಳಿಕೊಳ್ಳಲು ಮುಜುಗರ ಮಾಡಿಕೊಳ್ಳುತ್ತಿದ್ದಾರೆ. ಇದಾಗಬಾರದು, ಲಕ್ಷಣ ಕಂಡುಬಂದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ. ಚೆನ್ನೇನಹಳ್ಳಿಯಲ್ಲಿ ಜನಸೇವಾ ಕೋವಿಡ್ ಕೇರ್ ಸೆಂಟರ್ ಅನ್ನು ತೆರೆದಿದ್ದು, ೧೦೫ ಬೆಡ್ ಗೂ ಹೆಚ್ಚು ಸೌಲಭ್ಯವನ್ನು ನೀಡಿದ್ದೇವೆ. ಇಲ್ಲಿ ಅನೇಕರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ ೭೦-೮೦ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ಞಾನಭಾರತಿ ಕೋವಿಡ್ ಕೇರ್ ಸೆಂಟರ್ ನಲ್ಲಿ ೩೭೦ ಬೆಡ್ ಗಳಿದ್ದು, ೪೦ ಆಕ್ಸಿಜನ್ ಬೆಡ್ ಗಳಿವೆ. ಸೋಂಕಿತರು ಯಾರಿಗೂ ಕರೆ ಮಾಡಿ ಹೇಳಿಸಬೇಕಾದ ಅವಶ್ಯಕತೆ ಇಲ್ಲ. ಅಲ್ಲಿಗೆ ನೇರವಾಗಿ ಹೋಗಿ ದಾಖಲಾಗಬಹುದಾಗಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.