ಸಚಿವ ಈಶ್ವರಪ್ಪ ರಾಜೀನಾಮೆ ಸಾಧ್ಯತೆ

ಬೆಂಗಳೂರು,ಏ.೧- ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡಾಯ ಸಾರಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸದ್ಯದಲ್ಲೇ ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಅದರಲ್ಲೂ ಅವರ ಪುತ್ರ ಬಿ.ವೈ ವಿಜಯೇಂದ್ರ ಆಡಳಿತ ಹಸ್ತಕ್ಷೇಪ ಕುರಿತಂತೆ ವರಿಷ್ಠರಿಗೆ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಿಡಿದೆದ್ದಿರುವ ಈಶ್ವರಪ್ಪ ನೇರವಾಗಿ ಯಡಿಯೂರಪ್ಪನವರಿಗೆ ರಾಜೀನಾಮೆ ನೀಡದೆ ವರಿಷ್ಠರಿಗೆ ರಾಜೀನಾಮೆ ನೀಡಿ ಅವರ ನಿರ್ಧಾರಕ್ಕೆ ಎಲ್ಲವನ್ನೂ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ವರಿಷ್ಠರು ಪಂಚರಾಜ್ಯಗಳು ಚುನಾವಣೆಯಲ್ಲಿ ಸಕ್ರಿಯವಾಗಿರುವುದರಿಂದ ಸಮಯ ನೋಡಿಕೊಂಡು ಈಶ್ವರಪ್ಪ ಸದ್ಯದಲ್ಲೇ ದೆಹಲಿಗೆ ತೆರಳಲಿದ್ದಾರೆ ಎಂದು ಅವರ ಆಪ್ತಮೂಲಗಳು ಹೇಳಿವೆ.
ಕಳೆದ ೧೫-೨೦ ದಿನಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಸುದ್ದಿಗಳು ಬಿಜೆಪಿ ವಲಯದಲ್ಲಿ ಸದ್ದು ಮಾಡುತ್ತಿತ್ತು. ಪಂಚರಾಜ್ಯಗಳ ಚುನಾವಣೆ ನಂತರ ಯಡಿಯೂರಪ್ಪ ಬದಲಾವಣೆ ಖಚಿತ ಎಂಬ ಮಾಹಿತಿ ಎಲ್ಲೆಡೆ ಹಬ್ಬಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸಚಿವ ಈಶ್ವರಪ್ಪ ಅವರು ನಾಯಕತ್ವ ವಿರುದ್ಧ ಸಿಡಿದೆದ್ದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯಪಾಲ ವಝುವಾಯಿ ವಾಲಾ ಇವರುಗಳಿಗೆ ಲಿಖಿತ ದೂರು ನೀಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆಗೆ ವೇದಿಕೆ ಸಿದ್ಧಗೊಳಿಸಲು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆ ಖಚಿತ ಎಂಬಂತಹ ಪರಿಸ್ಥಿತಿ ನಿಮಾರ್ಣವಾಗಿರುವುದು ಸುಳ್ಳಲ್ಲ. ಆದರೆ, ಎಲ್ಲವೂ ವರಿಷ್ಠರ ತೀರ್ಮಾನದ ಮೇಲೆ ಅವಲಂಭಿತವಾಗಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷಗಳ ಪ್ರಭಾವಿ ೧೮ಕ್ಕೂ ಹೆಚ್ಚು ಶಾಸಕರುಗಳ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಹೆಚ್ಚಿನ ಅನುದಾನ ನೀಡಿರುವುದು ಆಡಳಿತ ಪಕ್ಷದ ಶಾಸಕರ ಕೆಂಗಣ್ಣಿಗೂ ಗುರಿಯಾಗಿದೆ.
ತಮ್ಮ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡದೆ ಆರ್ಥಿಕ ಮುಗಟ್ಟು ಇದೆ ಎಂದು ಕೈ ತೋರಿಸಿ ನಿರ್ಲಕ್ಷ್ಯ ಮಾಡಿ ಪ್ರತಿಪಕ್ಷ ಶಾಸಕರುಗಳಿಗೆ ಅನುದಾನ ನೀಡಿರುವುದು ಬಿಜೆಪಿ ಶಾಸಕರಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಎಲ್ಲ ವಿವರಗಳನ್ನು ಪಕ್ಷದ ವರಿಷ್ಠರ ಭೇಟಿ ಸಂದರ್ಭದಲ್ಲಿ ಈಶ್ವರಪ್ಪ ವಿವರಿಸಲಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಈ ಬೆಳವಣಿಗೆಗಳ ಬಗ್ಗೆ ಪ್ರತಿ ಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ಒತ್ತಾಯಿಸಿರುವ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಸಹ ಟ್ವಿಟರ್‌ನಲ್ಲಿ ಈಶ್ವರಪ್ಪನವರ ಬಂಡಾಯ, ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಬಯಲುಮಾಡಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಆಗ್ರಹಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರಪ್ಪ ಅವರ ಬಹಿರಂಗ ಬಂಡಾಯದ ಬಗ್ಗೆ ಮೌನಕ್ಕೆ ಶರಣಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈಶ್ವರಪ್ಪನವರ ತಂತ್ರಕ್ಕೆ ಪ್ರತಿತಂತ್ರವಾಗಿ ತಮ್ಮ ಪರಮಾಪ್ತ ಶಾಸಕರುಗಳನ್ನು ದೆಹಲಿಗೆ ಕಳುಹಿಸಿ ಈಶ್ವರಪ್ಪನವರ ವಿರುದ್ಧ ವರಿಷ್ಠರಿಗೆ ದೂರು ಕೊಡಿಸಲು ಮುಂದಾಗಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಸಚಿವ ಈಶ್ವರಪ್ಪ ಅವರು ಅನುದಾನ ಹಂಚಿಕೆ ಸಂದರ್ಭದಲ್ಲಿ ಯಾವರೀತಿ ಆಡಳಿತ ಪಕ್ಷದ ಶಾಸಕರಿಗೆ ತಾರತಮ್ಯ ಮಾಡಿದ್ದಾರೆ. ಕಮಿಷನ್‌ಗಾಗಿ ಅನುದಾನವನ್ನು ನೀಡದೆ ಸತಾಯಿಸಿರುವುದು ಎಲ್ಲವನ್ನೂ ವರಿಷ್ಠರ ಗಮನಕ್ಕೆ ತರಲು ನಿರ್ಧರಿಸಲಾಗಿದ್ದು, ಅದರಂತೆ ಸದ್ಯದಲ್ಲೇ ೨೫-೩೦ ಬಿಜೆಪಿ ಶಾಸಕರುಗಳು ದೆಹಲಿಗೆ ತೆರಳುವುದು ನಿಶ್ಷಿತ.
ಸಚಿವ ಈಶ್ವರಪ್ಪ ಅವರು ಅನುದಾನ ನೀಡಿಕೆಯಲ್ಲಿ ವಿಳಂಬದ ಬಗ್ಗೆ ಕಳೆದವಾರವಷ್ಟೇ ೬೦ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಮಾಡಿ ದೂರು ನೀಡಿದ್ದರು. ಶಾಸಕರ ಅಹವಾಲಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವವರು ಈಶ್ವರಪ್ಪನವರ ಗಮನಕ್ಕೆ ತಾರದೆ ನೇರವಾಗಿ ೧,೨೦೦ ಕೋಟಿ ಅನುದಾನವನ್ನು ವಿವಿಧ ಶಾಸಕರುಗಳಿಗೆ ಬಿಡುಗಡೆ ಮಾಡಿದ್ದರು. ಇದರಿಂದ ಕಮಿಷನ್ ತಪ್ಪಿತು ಎಂದು ಈಶ್ವರಪ್ಪ ಮುಖ್ಯಮಂತ್ರಿ ವಿರುದ್ಧ ದೂರು ನೀಡಿದ್ದಾರೆ ಅಷ್ಟೆ. ಅವರ ದೂರಿನಲ್ಲಿ ಸತ್ಯಾಂಶವಿಲ್ಲ ಎಲ್ಲವನ್ನೂ ವರಿಷ್ಠರ ಗಮನಕ್ಕೆ ತರುತ್ತೇವೆ. ಈಶ್ವರಪ್ಪ ವಿರುದ್ಧ ತಮ್ಮ ಬಳಿಯೂ ದಾಖಲೆಗಳಿವೆ. ಎಲ್ಲವನ್ನೂ ವರಿಷ್ಠರಿಗೆ ನೀಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ವಲಯದಲ್ಲಿನ ಶಾಸಕರೊಬ್ಬರು ’ಸಂಜೆವಾಣಿ”ಗೆ ತಿಳಿಸಿದರು.
ಈಶ್ವರಪ್ಪನವರ ದೂರಿನಲ್ಲಿ ಹುರುಳಿಲ್ಲ. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನಾವೇ ಶಾಸಕರುಗಳು ಈಶ್ವರಪ್ಪನವರ ಬಣ್ಣ ಬಯಲು ಮಾಡಲು ಸದ್ಯದಲ್ಲೇ ದೆಹಲಿಗೆ ಹೋಗುತ್ತೇವೆ ಎಂದು ಈ ಶಾಸಕರು ಹೇಳಿದರು.