ಸಚಿವೆ ಶಶಿಕಲಾ ಜೊಲ್ಲೆ ಅವರಿಂದ ಸರ್ಕಾರಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಕಾಮಗಾರಿ ಪರಿಶೀಲನೆ

ವಿಜಯಪುರ, ಜೂ.10-ಮುಂದಿನ ದಿನಗಳಲ್ಲಿ ನಗರದ ಸರ್ಕಾರಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ರೂಪಿಸಲು ಅನುಕೂಲವಾಗುವಂತೆ ಮುಂದಿನ 15 ತಿಂಗಳಿನಲ್ಲಿ ಈ ಆಸ್ಪತ್ರೆಯ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಖಾತೆ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಹೇಳಿದರು.
ನಗರದ ಸರ್ಕಾರಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಈ ವಿಷಯ ತಿಳಿಸಿದ ಅವರು ಈ ಆಸ್ಪತ್ರೆಯ ಕಾಮಗಾರಿಗಳು ವೇಗವಾಗಿ ನಡೆಯುತ್ತಿದು ಮೊದಲನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಆರ್.ಎನ್.ಆರ್ ಗುತ್ತಿಗೆದಾರರಿಗೆ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು ಉಸ್ತುವಾರಿ ವಹಿಸಿ ಮುಂದಿನ 15 ತಿಂಗಳಲ್ಲಿ ಈ ಆಸ್ಪತ್ರೆಯ ಎಲ್ಲಾ ಕಾಮಗಾರಿಗಳು ಪೂರ್ಣಗೊಳಿಸಲು ಸೂಚಿಸಿದೆ ಎಂದು ಹೇಳಿದರು.
ತಾಂತ್ರಿಕ ಕಾರಣಗಳಿಂದಾಗಿ ಈ ಆಸ್ಪತ್ರೆಯ ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದವು. ಕೋವಿಡ್-3 ಅಲೆಯ ಕುರಿತು ತಜ್ಞರ ಅಭಿಪ್ರಾಯ ದೃಷ್ಟಿಕೋನದಲ್ಲಿ ಇಟ್ಟುಕೊಂಡು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರಿಗೆ ಜನಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ಸಹ ಬೇಟಿ ಮಾಡಲಾಗಿತ್ತು. ಅದರಂತೆ ಮಾಜಿ ಆರೋಗ್ಯ ಸಚಿವರಾದ ಶಿವಾನಂದ ಪಾಟೀಲ್ ಅವರ ಸಲಹೆ ಮತ್ತು ಜನಪ್ರತಿನಿಧಿಗಳ ಸಲಹೆ ಹಿನ್ನೆಲೆ ಈ ಆಸ್ಪತ್ರೆಯ ಕಾಮಗಾರಿಗಳು ಈಗ ಆರಂಭಗೊಂಡಿವೆ ಎಂದು ಹೇಳಿದರು.
ಆಸ್ಪತ್ರೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ,ಈಗ ವಿದ್ಯುತ್, ನೀರು ಸರಬರಾಜು, ಚರಂಡಿ ಸೇರಿದಂತೆ ಎರಡನೇ ಹಂತದ ಕಾಮಗಾರಿಗಳು ತ್ವರಿತವಾಗಿ ಕಳೆದ 4 ದಿನಗಳಿಂದ ಆರಂಭಗೊಂಡಿವೆ. ಇದಕ್ಕಾಗಿ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಅಲೆಯನ್ನು ಸಮರ್ಪಕವಾಗಿ ನಿಭಾಯಿಸಲಾಗಿದೆ. ಆಕ್ಸಿಜನ್, ವಿವಿಧ ಆಸ್ಪತ್ರೆಗಳ ಬೆಡ್ ನಿರ್ವಹಣೆ ಸಹ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 6 ಕೆ.ಎಲ್, ಎಲ್ ಎಂ ಒ ಟ್ಯಾಂಕ್ ಮೂಲಕ 208 ಆಕ್ಸಿಜನ್ ಬೆಡ್ ಗಳನ್ನು ಸಹ ನಿರ್ವಹಿಸಲಾಗಿದೆ. ಅದರಂತೆ ಪ್ರತಿ ನಿಮಿಷಕ್ಕೆ 1000 ಲೀಟರ್ ಆಕ್ಸಿಜನ್ ಪೂರೈಸುವ ಪಿ ಎಸ್ ಎಫ್ ಆಕ್ಸಿಜನ್ ಪ್ಲಾಂಟ್ ಮಂಜೂರಾತಿ ಯಾಗಿದ್ದು ಈ ಘಟಕದ ಸಿವಿಲ್ ಕಾಮಗಾರಿಗಳು ನಡೆಯುತ್ತಿವೆ. ಅದರಂತೆ 13 ಕೆಎಲ್, ಎಂಒ ಟ್ಯಾಂಕ್ ಮಂಜೂರಾತಿಗೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಸಸಲಾಗಿದ್ದು, ಕೇಂದ್ರದಿಂದ ಸಕಾರಾತ್ಮಕವಾಗಿ ಸ್ಪಂದನೆಯಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ವೈದ್ಯರ ಕೊರತೆ ನೀಗಿಸಲು ಕ್ರಮಕೈಗೊಳ್ಳಲಾಗಿದ್ದು ಮುಂಬರುವ ದಿನಗಳಲ್ಲಿ ಕೋವಿಡ್ 3 ನೇ ಅಲೆ ಎದುರಿಸಲು ಸರ್ವರೀತಿಯಿಂದಲೂ ಸನ್ನದ್ಧ ಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ರಮೇಶ್ ಜಿಗಜಿಣಗಿ, ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ, ಹನುಮಂತ ನಿರಾಣಿ, ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು