ಸಚಿವ,ಶಾಸಕರ ಕಿತ್ತಾಟದಿಂದ ಜಿಲ್ಲೆಯ ಅಭಿವೃದ್ದಿ ಕುಂಠಿತ

ರಾಯಚೂರು,ಆ.೪- ಜಿಲ್ಲೆಯಲ್ಲಿ ಸಚಿವರದೊಂದು ಬಣ, ಶಾಸಕರದ್ದೊಂದು ಬಣ ಎನ್ನುವಂತಾಗಿದೆ. ಪರಿಶೀಲನಾ ಸಭೆಯನ್ನು ಉಸ್ತುವಾರಿ ಸಚಿವರು ಮಾಡುತ್ತಾರೆ. ನಂತರ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಅವರು ಮತ್ತೊಂದು ಸುತ್ತು ಅಧಿಕಾರಿಗಳ ಸಭೆ ನಡೆಸುವ ಮೂಲಕ ಮೇಲಾಟಕ್ಕೆ ಬಿದ್ದಿರುವುದರಿಂದ ಗೊಂದಲವುಂಟಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಆರೋಪಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಒಡೆದ ಮನೆಯಾಗಿದೆ. ಪಕ್ಷದಲ್ಲಿ ಕಿತ್ತಾಟ ಪ್ರಾರಂಭವಾಗಿದೆ. ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ನಡುವೆ ಕಿತ್ತಾಟ, ಸಚಿವರು-ಶಾಸಕರ ನಡುವೆ ಅಸಮಾಧಾನ ಸ್ಫೋಟವಾಗಿದೆ, ಇನ್ನೂ
ರಿ-ಬೂಟ್ ಹೆಸರಿನಲ್ಲಿ ನಡೆಸುತ್ತಿರುವ ಸಂವಾದ ಜನರನ್ನು ಹಾದಿ ತಪ್ಪಿಸಲು ಮಾಡುತ್ತಿರುವ ಜನರನ್ನು ಸೆಳೆಯಲು ಮಾಡುತ್ತಿರುವ ತಂತ್ರ ಹಾಗೂ ಜನರ ಕಿವಿಗೆ ಹೂ ಇಡಲು ಹೊರಟಿದ್ದಾರೆ ಎಂದು ಲೇವಡಿಯಾಡಿದ ಅವರು, ಇನ್ನೂ ಒಂದು ವರ್ಷ ಯಾವುದೇ ಕಾರ್ಯಗಳಿಗೂ ನಯಾಪೈಸೆ ಬಿಡುಗಡೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದರೆ ಸಹಸ್ರಾರು ಕೋಟಿ ರೂ ಅಭಿವೃದ್ಧಿಯ ನೀಲನಕ್ಷೆಯ ಬಗ್ಗೆ ಸಚಿವ ಎನ್.ಎಸ್.ಭೋಸರಾಜು ಮಾತನಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದರಲ್ಲದೆ ಅವರು ಸರಕಾರದಲ್ಲಿ ಅನುದಾನ ಕೊರತೆಯಿರುವಾಗ ಇವರು ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ ಅವರು, ನಗರಕ್ಕೆ ಉತ್ತಮ ರಸ್ತೆ, ಕುಡಿಯಲು ಸಮರ್ಪಕ ನೀರು ಮೊದಲು ಕೊಡುವುದಕ್ಕೆ ಆದ್ಯತೆ ನೀಡಲಿ ಎಂದು ಸಲಹೆ ನೀಡಿದರು.
ದೇವದುರ್ಗದಲ್ಲಿ ನಡೆಯುವ ಮರಳು ಮಾಫಿಯಾದ ಕಿಂಗ್ ಪಿನ್ ಕಾಂಗ್ರೆಸ್ ಪಕ್ಷದ ರವಿ ಭೋಸರಾಜ್ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಗಂಭೀರ ಆರೋಪ ಮಾಡಿದರು.
ದೇವದುರ್ಗದ ಬಾವೂರ ಎಂಬಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿದೆ ಎನ್ನುವ ಮಾಹಿತಿಯನ್ನಾಧರಿಸಿ ಸಂಬಂಧಿಸಿ ಸ್ಥಳೀಯ ಶಾಸಕಿ ಕರೆಮ್ಮ ನಾಯಕ ಅವರು ಗಣಿಗಾರಿಕೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಬಂದಿದ್ದ ೨೦೦ ಕ್ಕೂ ಹೆಚ್ಚು ಲಾರಿಗಳನ್ನು ವಾಪಸ್ಸು ಕಳುಹಿಸಿದ್ದಾರೆ. ಈ ಅಕ್ರಮ ಮರಳು ಸಾಗಾಣಿಕೆ ಕಿಂಗ್ ಪಿನ್ ಆಗಿ ಸಚಿವ ಎನ್.ಎಸ್.ಭೋಸರಾಜ್ ಅವರ ಮಗ ರವಿ ಭೋಸರಾಜ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಎನ್. ಶಿವಶಂಕರ ವಕೀಲ, ವಿಶ್ವನಾಥ ಪಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.