
ತಿ.ನರಸೀಪುರ: ಮಾ.09:- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸಚಿವನ ಮೇಲೆ ಸೂಕ್ತಕ್ರಮ ಕೈಗೊಳ್ಳುವಂತೆ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ದಸಂಸ ಸಂಚಾಲಕ ಬನ್ನಹಳ್ಳಿ ಸೋಮಣ್ಣ ತಿಳಿಸಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟ ಮತ್ತು ಸಮಾನ ಮನಸ್ಕ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಧರಣಿಯನ್ನು ನಡೆಸುತ್ತಿದ್ದು,ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಸಿದ್ದರಾಮಯ್ಯರ ವಿರುದ್ಧ ನೀಡಿದ್ದ ಪ್ರಚೋದನಕಾರಿ ಹೇಳಿಕೆಯನ್ನು ಖಂಡಿಸಿ ಅವರನ್ನು ಶೀಘ್ರ ಬಂಧಿಸುವಂತೆ ಪ್ರತಿಭಟನೆ ನಡೆಯಲಿದೆ ಎಂದರು.
ಒಬ್ಬ ಜವಾಬ್ದಾರಿಯುತ ಸಚಿವನಾಗಿದ್ದು ಸಮಾಜದ ಧ್ರುವೀಕರಣ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ.ಕೊಲೆ ಬೆದರಿಕೆ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಸರ್ಕಾರ ಏಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.ಅವರನ್ನು ಶೀಘ್ರ ಬಂಧಿಸಬೇಕು. ಬುದ್ಧ ,ಬಸವ,ಅಂಬೇಡ್ಕರ್ ,ಕನಕ,ಕುವೆಂಪುರವರ ಆಶಯಗಳನ್ನು ಕರ್ನಾಟಕದ ನೆಲದಲ್ಲಿ ನಶಿಸಲು ಅವಕಾಶ ನೀಡದಿರಲು ಎಲ್ಲ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡಬೇಕಿದೆ ಎಂದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ಎಸ್.ಮಹದೇವಸ್ವಾಮಿ(ಮನ್ನೆಹುಂಡಿ ಮಹೇಶ್) ಮಾತನಾಡಿ,ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಹೊಡೆದು ಹಾಕುವಂತೆ ಹೇಳಿಕೆ ನೀಡಿದ್ದ ಸಚಿವ ಅಶ್ವಥ್ ನಾರಾಯಣ್ ಬಂಧಿಸದೆ ಇರುವ ಸರ್ಕಾರದ ಕ್ರಮವನ್ನು ಖಂಡಿಸಿದರು.ಇದರ ವಿರುದ್ಧ ನಡೆಯಲಿರುವ ಪ್ರತಿಭಟನೆಯಲ್ಲಿ ಎಲ್ಲ ಸಮುದಾಯದ ಜನರು ಭಾಗವಹಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ ಮಾತನಾಡಿ,ಸಚಿವರು ಅವರ ಹುದ್ದೆಗೆ ತಕ್ಕುದಾಗಿ ನಡೆದುಕೊಳ್ಳುತ್ತಿಲ್ಲ.ಬದಲಾಗಿ ಪುಡಿ ರೌಡಿಯಂತೆ ವರ್ತಿಸುತ್ತಿದ್ದು,ಈ ಹಿಂದೆಯೂ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ್ದರು.
ಹಾಗಾಗಿ ಸಚಿವ ಸ್ಥಾನದಿಂದ ಅಶ್ವತ್ ನಾರಾಯಣ್ ರನ್ನು ಕೈಬಿಡುವಂತೆ ನಾಳೆ ಧರಣಿ ನಡೆಯುತ್ತಿದ್ದು,ದಲಿತ ,ಹಿಂದುಳಿದ ವರ್ಗ,ಅಲ್ಪಸಂಖ್ಯಾತ ಮತ್ತು ಇತರೆ ತಳಮಟ್ಟದ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಪುರಸಭೆ ಮಾಜಿ ಅಧ್ಯಕ್ಷ ಹೆಳವರಹುಂಡಿ ಸೋಮಣ್ಣ,ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು,ಕಾಂಗ್ರೆಸ್ ಪದವೀಧರ ವಕ್ತಾರ ಎಂ. ರಮೇಶ್,ಡಿಎಸ್‍ಎಸ್ ಜಿಲ್ಲಾ ಸಂಚಾಲಕ ವಾಟಾಳು ನಾಗರಾಜು,ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಸಂತೃಪ್ತಿ ಕುಮಾರ್, ಮುಸುವಿನಕೊಪ್ಪಲು ಶಿವರಾಮ್,ಡಿಎಸ್‍ಎಸ್ ತಾಲ್ಲೂಕು ಸಂಚಾಲಕ ಬಸವರಾಜು,ಸುರೇಶ ಇತರರು ಹಾಜರಿದ್ದರು.