ಸಚಿವರ ಸೂಚನೆ ಮೇರೆಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಕೆ

ಬೀದರ:ಎ.29: ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಸೂಚನೆಯಂತೆ ಬೀದರ ಬ್ರಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್‍ಗಳಲ್ಲಿ 24 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಸಚಿವರು ಇತ್ತೀಚೆಗೆ ನಡೆಸಿದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆಯಲ್ಲಿ ಬ್ರಿಮ್ಸ್ ಆಸ್ಪತ್ರೆಯಲ್ಲಿರುವ ಲೋಪಗಳ ಬಗ್ಗೆ ಗಮನಕ್ಕೆ ತರಲಾಗಿತ್ತು. ಅಲ್ಲಿಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು ಸೂಕ್ತ ಚಿಕಿತ್ಸೆ ಲಭ್ಯವಾಗದೇ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿದ್ದವು. ಕೋವಿಡ್ ಸೋಂಕಿತರ ಬಳಿಗೆ ವೈದ್ಯರು ಹೋಗದೇ ಕೇವಲ ನರ್ಸ್‍ಗಳನ್ನು ಮಾತ್ರ ಕಳುಹಿಸಲಾಗುತ್ತಿದೆ ಎನ್ನುವ ವೈದ್ಯರ ಕರ್ತವ್ಯಲೋಪದ ಬಗ್ಗೆ ಸಚಿವರ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವಾರ್ಡ್‍ಗಳಲ್ಲಿ ಸಿಸಿಟಿವಿ ಅಳವಡಿಸಿ ರೋಗಿಗಳ ಮೇಲೆ ನಿಗಾ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅದರಂತೆ ಬ್ರಿಮ್ಸ್ ಆಸ್ಪತ್ರೆಯ ಮುಖ್ಯದ್ವಾರ ಒಳಗೊಂಡು ಎಲ್ಲಾ ಕೋವಿಡ್ ವಾರ್ಡ್‍ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಕೇವಲ ಸಿಸಿಟಿವಿ ಅಳವಡಿಸಿರುವುದಷ್ಟೇ ಅಲ್ಲದೇ ಮಾನವೀಯತೆಯ ದೃಷ್ಟಿಯಿಂದ ಕೋವಿಡ್ ಸೋಂಕಿತರೆಲ್ಲರಿಗೂ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಪ್ರತಿದಿನ ಹೆಚ್ಚಿನ ಸಂಖ್ಯೆಯ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ರೋಗಿಗಳಿಗೆ ಚಿಕಿತ್ಸೆ ಕಲ್ಪಿಸುವ ವಿಷಯದಲ್ಲಿ ದೂರುಗಳು ಬಾರದ ಹಾಗೆ ಎಚ್ಚರಿಕೆ ವಹಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿಯೂ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬ ಧೈರ್ಯವನ್ನು ಜನರಲ್ಲಿ ಮೂಡಿಸಬೇಕು. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಯಾವುದೇ ಹಿಂಜರಿಕೆಯಿಲ್ಲದೇ ಚಿಕಿತ್ಸೆ ಪಡೆಯುವಂತಾಗಬೇಕು. ಸಿಸಿಟಿವಿ ಅಳವಡಿಸಿರುವ ಕಾರಣಕ್ಕೆ ಮಾತ್ರ ಕೆಲಸ ಮಾಡದೇ ವೃತ್ತಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು. ಸಿಸಿಟಿವಿಗಳು ಸರಿಯಾಗಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಬ್ರಿಮ್ಸ್ ನಿರ್ದೇಶಕರು ಅಥವಾ ಇನ್ನಿತರೆ ಅಧಿಕಾರಿಗಳು ಬ್ರಿಮ್ಸ್‍ನಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಗಮನಿಸುವ ಮೂಲಕ ವೈದ್ಯಕೀಯ ಸಿಬ್ಬಂದಿ ಶಿಸ್ತಿನಿಂದ ಕೆಲಸ ನಿರ್ವಹಿಸುವಂತೆ ಜಾಗೃತಿ ವಹಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.