ಸಚಿವರ ವಿರುದ್ಧ ಶಾಸಕರ ದೂರು

ಬೆಂಗಳೂರು, ಮಾ. ೨೫- ಶಾಸಕರ ಅಹವಾಲುಗಳಿಗೆ ಸ್ಪಂದಿಸಿ ಶಾಸಕರ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಿ ಅವರ ಜತೆ ಸೌಹಾರ್ದತೆ, ಸಮನ್ವಯನ್ನು ಕಾಯ್ದುಕೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರುಗಳಿಗೆ ತಾಕೀತು ಮಾಡಿದ್ದಾರೆ.
ಹಲವು ಸಚಿವರುಗಳು ತಮಗೆ ಸ್ಪಂದಿಸುತ್ತಿಲ್ಲ. ಅಭಿವೃದ್ಧಿ ಕಾರ್ಯ, ಅನುದಾನ ಬೇಡಿಕೆ ಸೇರಿದಂತೆ ಯಾವುದೇ ವಿಚಾರಗಳಿಗೂ ಸಚಿವರುಗಳೂ ಆಸಕ್ತಿ ತೋರದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಡಳಿತ ಪಕ್ಷದ ಹಲವು ಶಾಸಕರುಗಳು ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಗೃಹ ಕಛೇರಿ ಕೃಷ್ಣಾದಲ್ಲಿ ಶಾಸಕರು ಹಾಗೂ ಸಚಿವರುಗಳ ಸಭೆ ನಡೆಸಿದ ಸಂದರ್ಭದಲ್ಲಿ ಶಾಸಕರು ಹಾಗೂ ಸಚಿವರುಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಇಂದಿನ ಈ ಸಭೆಯಲ್ಲಿ ಬಿಜೆಪಿಯ ೨೫ ಕ್ಕೂ ಹೆಚ್ಚು ಶಾಸಕರು ಪಾಲ್ಗೊಂಡಿದ್ದು, ಉಪಮುಖ್ಯಮಂತ್ರಿ ಗೋವಿಂದಕಾರಜೋಳ, ಬಸವರಾಜಬೊಮ್ಮಾಯಿ, ಮುರುಗೇಶ್‌ನಿರಾಣಿ, ಶ್ರೀರಾಮುಲು, ನಾರಾಯಣಗೌಡ ಸೇರಿದಂತೆ ಕೆಲ ಸಚಿವರುಗಳು ಪಾಲ್ಗೊಂಡಿದ್ದರು.
ಸಚಿವರುಗಳ ಮೇಲೆ ಹಲವು ಶಾಸಕರುಗಳು ಅಸಮಾಧಾನ ಹೊರ ಹಾಕಿ, ಕೆಲ ಸಚಿವರುಗಳು ಉದ್ದೇಶ ಪೂರ್ವಕವಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೋಕೋಪಯೋಗಿ, ಕಂದಾಯ, ಉನ್ನತ ಶಿಕ್ಷಣ ಸೇರಿದಂತೆ ಆರು ಸಚಿವರುಗಳ ಮೇಲೆ ಶಾಸಕರುಗಳು ಸಭೆಯಲ್ಲಿ ದೂರುಗಳ ಸುರಿಮಳೆ ಸುರಿದಿದ್ದು, ಎಲ್ಲವನ್ನು ಶಾಂತಚಿತ್ತದಿಂದ ಆಲಿಸಿದ ಮುಖ್ಯಮಂತ್ರಿಗಳು, ಮುಂದೆ ಹೀಗಾಗದಂತೆ ಸಚಿವರುಗಳಿಗೆ ಸ್ಪಷ್ಟ ಸೂಚನೆ ನೀಡುವ ಭರವಸೆಯನ್ನು ಶಾಸಕರಿಗೆ ನೀಡಿದರು.
ಮುಖ್ಯಮಂತ್ರಿಗಳು ಸಹಿ ಮಾಡಿ ನೀಡಿದ ಅನುದಾನವನ್ನು ಸಚಿವ ಈಶ್ವರಪ್ಪ ತಡೆ ಹಿಡಿದಿದ್ದಾರೆ. ಹೀಗಾದರೆ ಹೇಗೆ ಎಂದು ಕೆಲ ಶಾಸಕರು ಪ್ರಶ್ನಿಸಿದರು.
ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೋಕೋಪಯೋಗಿ ಇಲಾಖೆಗಳ ಸಚಿವರುಗಳು ಆಡಳಿತ ಪಕ್ಷದ ಶಾಸಕರ ಜತೆ ನಿರ್ಲಕ್ಷ್ಯ ತಾಳಿರುವುದನ್ನು ಸಭೆಯಲ್ಲಿ ಕೆಲ ಶಾಸಕರು ಪ್ರಸ್ತಾಪಿಸಿದರು.
ಅಸಮಾಧಾನಿತ ಶಾಸಕರನ್ನು ಸಮಾಧಾನಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಮುಂದೆ ಹೀಗಾಗದಂತೆ ಎಚ್ಚರವಹಿಸಿ ಎಂದು ಸಚಿವರುಗಳಿಗೆ ಸೂಚಿಸಿದರು.
ಇಂದಿನ ಈ ಸಭೆಯಲ್ಲಿ ಶಾಸಕರುಗಳಾದ ರೇಣುಕಾಚಾರ್ಯ, ಎಂ.ಪಿ. ಕುಮಾರಸ್ವಾಮಿ, ರಾಜೀವ್, ಬೆಳ್ಳಿ ಪ್ರಕಾಶ್, ಸುನಿಲ್ ಬಿಳಿಯಾನಾಯಕ್, ದಿನಕರ್‌ಶೆಟ್ಟಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ರಾಜೂಗೌಡ, ಬಸವರಾಜುದಡಸಗೊರು, ಅರಗ ಜ್ಞಾನೇಂದ್ರ, ರಾಜೇಶ್‌ಗೌಡ, ಹರೀಶ್ ಪೂಂಜಾ, ಜೋತಿಗಣೇಶ್, ಎಸ್.ವಿ. ರಾಮಚಂದ್ರ, ರೂಪಾಲಿನಾಯಕ್, ವೇದವ್ಯಾಸಕಾಮತ್, ನೆಹರು ಓಲೇಕರ್, ಡಾ. ಅವಿನಾಶ್ ಜಾದವ್, ನಿರಂಜನ್, ದೊಡ್ಡನಗೌಡಪಾಟೀಲ್, ಚಂದ್ರಪ್ಪ, ಟಿ.ಎಸ್. ಸುರೇಶ್ ಸೇರಿದಂತೆ ಹಲವು ಶಾಸಕರುಗಳು ಪಾಲ್ಗೊಂಡಿದ್ದರು.