ಸಚಿವರ ರಾಜೀನಾಮೆಗೆ ಆಗ್ರಹಿಸಿ ಮನವಿ

ಧಾರವಾಡ ಮೇ.4–ನಿನ್ನೆ ರಾಜ್ಯದ ಚಾಮರಾಜ ನಗರ ಸರಕಾರಿ ಆಸ್ಪತ್ರೆಯಲ್ಲಿ 24 ಸೋಂಕಿತರು ಆಕ್ಸಿಜೆನ್ ಪೂರೈಕೆಇಲ್ಲದೆ ಸಾವನ್ನಪ್ಪಿರುವುದು ಕರ್ನಾಟಕ ಸರಕಾರದ ಆಡಳಿತ ವೈಫಲ್ಯವನ್ನು ಎತ್ತಿತೋರಿಸುತ್ತದೆ. ಮುಖ್ಯವಾಗಿ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ ಅವರ ಬೇಜವಾಬ್ದಾರಿತನ ಮತ್ತು ಅವರು ತಮ್ಮ ಕರ್ತವ್ಯದಲ್ಲಿ ವಿಫಲರಾಗಿದ್ದು ಈ ಕೂಡಲೇ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಮಹಾನಗರ ಕಾಂಗ್ರೇಸನ ವಕ್ತಾರ ಮತ್ತು ಕೆಪಿಸಿಸಿ ಸದಸ್ಯರಾದ ರಾಬರ್ಟ ದದ್ದಾಪುರಿ ಹಾಗೂ ಆನಂದ ಜಾದವ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುಮಾರು 3 ಗಂಟೆಗಳ ಅವಧಿಯಲ್ಲಿ 24 ಜನ ಸೋಂಕಿತರು ಆಮ್ಲಜನಕವಿಲ್ಲದೆ ಪ್ರಾಣವನ್ನು ಬಿಟ್ಟಿರುವುದು ಡಾ. ಕೆ. ಸುಧಾಕರ ಅವರ ಅವ್ಯವಸ್ಥೆಯ ಆಡಳಿತವನ್ನು ಎತ್ತಿತೋರಿಸುವಂತಿದೆ. ಸೋಂಕಿತರು ಆಕ್ಸಿಜೆನ್ ಇಲ್ಲದೆ ಹಾಸಿಗೆಯಲ್ಲಿಯೇ ಒದ್ದಾಡಿ ಸತ್ತಿರುವುದನ್ನು ನೋಡಿದರೆ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ ಅವರ ಮೇಲೆ ಐ.ಪಿ.ಸಿ. ಸೆಕ್ಷನ್ 302 ಕೇಸ್‍ನ್ನು ಈ ಕೂಡಲೇ ಸರಕಾರವು ದಾಖಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದುರಂತದ ಸಮಗ್ರ ತನಿಖೆಗೆ ಸರಕಾರವು ಆದೇಶಿಸಿರುವುದು `ತಿಪ್ಪೆ ಸಾರಿಸುವ’ ಕೆಲಸವಾಗಿದೆ. ಅಂಗೈ ಹುಣ್ಣಿಗೆ ಕನ್ನಡಿ ಏಕೆ ಬೇಕು? ಈ ಆಕ್ಸಿಜೆನ್ ಕೊರತೆಯ ಹಾಗೂ 24 ಜನ ಸೋಂಕಿತರ ಕೊಲೆಗೆ ನೇರ ಹೊಣೆಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ ಅವರದ್ದಾಗಿದೆ. ಮುಖ್ಯ ಮಂತ್ರಿಗಳೇ ಕರದಾತರ ಜೀವಕ್ಕೆ ಬೆಲೆಯೇ ಇಲ್ಲವೆ? ಜವಾಬ್ದಾರರಾದ ತಾವುಗಳು ಕರ್ನಾಟಕ ಮುಖ್ಯಮಂತ್ರಿಗಳಾಗಿ ಈವರೆಗೂ ಆರೋಗ್ಯ ಸಚಿವರ ರಾಜೀನಾಮೆಯನ್ನು ಪಡೆಯದಿರುವುದನ್ನು ನೋಡಿದರೆ ಸಮಸ್ತ ತಮ್ಮ ಸರಕಾರವೇ ಬ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಸಂಶಯವು ಮೂಡುತ್ತದೆ.
ಮುಖ್ಯಮಂತ್ರಿಗಳು ನಿನ್ನೆ ನಡೆದ ಈ ಕರಾಳ ದುರಂತದಲ್ಲಿ ಆಮ್ಲಜನಕವಿಲ್ಲದೇ ಸಾವಿಗೀಡಾದ 24 ಜನ ಸೋಂಕಿತರಿಗೆ ನ್ಯಾಯ ಸಿಗಬೇಕಾದರೆ ಹಾಗೂ ಈ ಸಮಸ್ತ ನಾಡಿನ ಜನತೆಗೆ ರಕ್ಷಣೆ ಸಿಗಬೇಕಾದರೆ ಈ ಕೂಡಲೇ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ ಅವರ ಹಾಗೂ ಉಸ್ತುವಾರಿ ಸಚಿವರಾದ ಎಸ್. ಸುರೇಶಕುಮಾರ ಅವರ ರಾಜೀನಾಮೆಯನ್ನು ಮತ್ತು ಮೃತರ ಕುಟುಂಬಗಳಿಗೆ ಪರಿಹಾರವನ್ನು ತಕ್ಷಣವೇ ಪಡೆಯಬೇಕು ಎಂದರು.
ಪ್ರತಿಭಟನೆಯಲ್ಲಿ ಆನಂದ ಜಾದವ,ಪ್ರಕಾಶ ಘಾಟಗೆ,ನಾಗರಾಜ ಗುರಿಕಾರ,ಆನಮಂದ ಮೂಶಣ್ಣವರ ಉಪಸ್ಥಿತರಿದ್ದರು.