ಸಚಿವರ ಮನೆಗೆ ತೆರಳಿ ಲಸಿಕೆ ನೀಡಿದ ವೈದ್ಯ ಅಮಾನತು

ಬೆಂಗಳೂರು,ಏ೨-ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ್ದ ಆರೋಗ್ಯಾಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ
ಕಳೆದ ಮಾರ್ಚ್ ೨ ರಂದು ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಡಾ. ಝಡ್. ಆರ್. ಮಕಾಂದಾರ ಅವರು ಸಚಿವ ಬಿ.ಸಿ.ಪಾಟೀಲ್ ಮನೆಗೆ ಹೋಗಿ ಲಸಿಕೆ ನೀಡಿದ್ದರು ಇದು ಕೊರೋನಾ ಲಸಿಕೆ ನೀಡಿಕೆ ನಿಯಮ ಉಲ್ಲಂಘನೆ ಎಂದು ಹೇಳಲಾಗಿತ್ತು ಮನೆಯಲ್ಲಿ ಲಸಿಕೆ ತೆಗೆದುಕೊಂಡ ಸಚಿವ ಬಿಸಿ ಪಾಟೀಲ್ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು. ಸಚಿವರಿಗೆ ಮನೆಗೆ ತೆರಳಿ ಲಸಿಕೆ ನೀಡಿದ ಆರೋಗ್ಯ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ನಿಯಮಗಳ ಪ್ರಕಾರ ವಯಸ್ಕರೇ ಆಗಲಿ ವೃದ್ದರೇ ಆಗಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ನಿಯಮಾನುಸಾರ ನಿಗದಿತ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು.