ಸಚಿವರ ಬಾಯಿಗೆ ಸಿ.ಎಂ ಬೀಗ

ಬೆಂಗಳೂರು,ಏ.೨೯- ಯಾವುದೇ ಸಚಿವರುಗಳು ವಿವಾದ-ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ನೀಡದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲ ಸಚಿವರುಗಳಿಗೆ ಕಟ್ಟುನಿಟ್ಟನ ಸೂಚನೆ ನೀಡಿದ್ದಾರೆ.
ಆಹಾರ ಸಚಿವ ಉಮೇಶಕತ್ತಿ ಅವರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲ ಸಚಿವರ ಜತೆ ಮಾತನಾಡಿ ವಿವಾದಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡಬೇಡಿ, ಮಾತನಾಡುವಾಗ ಎಚ್ಚರ ವಹಿಸಿ ಎಂದು ಕಟ್ಟಪ್ಪಣೆ ಮಾಡಿದ್ದಾರೆ.
ಕೋವಿಡ್‌ನ ಈ ಸಂಕಷ್ಟ ಸಂದರ್ಭದಲ್ಲಿ ಮನಬಂದಂತೆ ನಾಲಿಗೆ ಹರಿಯ ಬಿಡಬೇಡಿ, ಏನು ಮಾತನಾಡುತ್ತಿದ್ದೇವೆ ಎಂಬುದನ್ನು ಅರಿತು ಎಷ್ಟು ಬೇಕೋ ಅಷ್ಟೇ ಮಾತನಾಡಿ ಎಂದು ಮುಖ್ಯಮಂತ್ರಿಗಳು ಸಚಿವ ಸಹದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ.
ಯಾರು ಏನೋ ಟೀಕೆ ಮಾಡಿದರು ಎಂದು ಉದ್ವೇಗದಲ್ಲಿ, ಆಕ್ರೋಶದಲ್ಲಿ ಮಾತನಾಡುವುದು ಬೇಡ. ಅನಗತ್ಯ ಹೇಳಿಕೆಗಳಿಂದ ಗೊಂದಲ ಸೃಷ್ಟಿಯಾಗುತ್ತದೆ. ಆದಷ್ಟು ಮಾದ್ಯಮಗಳಿಂದ ದೂರ ಇರಿ, ಮಾತನಾಡುವ ಅವಶ್ಯಕತೆ ಉಂಟಾದಾಗ ಎಚ್ಚರಿಕೆಯಿಂದ ವಿವೇಚನೆ ಬಳಿಸಿ ಮಾತನಾಡಿ ಎಂದು ಮುಖ್ಯಮಂತ್ರಿಗಳು ಸಲಹೆ ಮಾಡಿದ್ದಾರೆ.
ಕೋವಿಡ್‌ನ ಈ ಸಂದರ್ಭದಲ್ಲಿ ಮಾತನ್ನು ಕಡಿಮೆ ಮಾಡಿ ಇನ್ನೊಬ್ಬರ ಮೇಲೆ ದೂರುವುದನ್ನು ಬಿಟ್ಟು ನಿಮ್ಮ ಕೆಲಸ ನೀವು ಮಾಡಿ. ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣದತ್ತ ಗಮನ ನೀಡಿ, ಅನಗತ್ಯ ಮಾತು ಬೇಡ ಎಂದು ಯಡಿಯೂರಪ್ಪ ಸಚಿವರಿಗೆ ತಾಕೀತು ಮಾಡಿದ್ದಾರೆ.
ತರಾಟೆ-ಕ್ಷಮೆ
ಆಹಾರ ಸಚಿವ ಉಮೇಶ್‌ಕತ್ತಿ ಅವರು ಪಡಿತರ ಅಕ್ಕಿಯನ್ನು ಕಡಿತಗೊಳಿಸಿದ್ದನ್ನು ಪ್ರಶ್ನಿಸಿದ ರೈತರೊಬ್ಬರಿಗೆ ಸತ್ತು ಹೋದರೆ ಒಳ್ಳೆಯದು ಎಂದು ನೀಡಿದ್ದ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಕತ್ತಿ ಅವರನ್ನು ತರಾಟೆಗೆ ತೆಗೆದುಕೊಂಡು ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ತಮ್ಮ ಮಾತು ವಿವಾದಕ್ಕೆ ಕಾರಣವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ದ ಬೆನ್ನಲ್ಲೆ ಸಚಿವ ಉಮೇಶ್ ಕತ್ತಿ ತಮ್ಮ ಮಾತಿಗೆ ಕ್ಷಮೆ ಕೋರಿದರು.