ಸಚಿವರ ತವರಲ್ಲಿ ಕಾಣದ ಸ್ವಚ್ಛತೆ :ಚರಂಡಿಯ ಹೂಳು; ರಸ್ತೆಗೆ ನೀರು, ಬಚ್ಚಲು ಗುಂಡಿಯಾದ ಕರಂಜಿ.ಕೆ ಗ್ರಾಮದ ರಸ್ತೆಗಳು

ಔರಾದ :ಜ.15: ನಾನಾ ಓಣಿಯ ರಸ್ತೆ ಬದಿ ನಿರ್ಮಿಸಲಾದ ಚರಂಡಿ ಕಾಮಗಾರಿ ಅಪೂರ್ಣ, ಕೆಲಸ ಮುಗಿದ ಚರಂಡಿಯಲ್ಲಿ ತುಂಬಿದ ತ್ಯಾಜ್ಯ, ಹೂಳು. ಚರಂಡಿ ಮೂಲಕ ಹರಿಯಬೇಕಿದ್ದ ಗೃಹ ಬಳಕೆ ಕೊಳಚೆ ನೀರು ರಸ್ತೆಗೆ ಬಂದರೆ, ಇನ್ನು ಕೆಲವೊಮ್ಮೆ ಸುರಿದ ಮಳೆ ನೀರು ಮನೆಯೊಳಗೆ. ಎಲ್ಲೆಡೆ ಕಾಣುತ್ತಿರುವ ನೈರ್ಮಲ್ಯದ ಸಮಸ್ಯೆ. ಅವ್ಯವಸ್ಥೆಯ ಆಗರದಲ್ಲಿ ಗ್ರಾಮಸ್ಥರು, ಸ್ವಚ್ಛತೆ ಇಲ್ಲದೆ ಚರಂಡಿ ರಸ್ತೆ ಮೇಲೆಯೆ ನಿತ್ಯ ಜನರ ನರಕ ಯಾತನೆ.

ತಾಲೂಕಿನ ನಾಗಮಾರಪಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕರಂಜಿ.ಕೆ ಗ್ರಾಮದ ದುಸ್ಥಿತಿಯ ಚಿತ್ರಣ ಇದಾಗಿದೆ. ಗ್ರಾಮದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಬರುವ ಕಾರಣ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ.
.
ಹಾಳಾದ ಚರಂಡಿಯಿಂದಾಗಿ ಮನೆಗಳ ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಅಲ್ಲದೇ ರಸ್ತೆಯ ಮೇಲೆ ಬಿದ್ದ ಗುಂಡಿಗಳಲ್ಲಿ ಹೊಲಸು ನೀರು ನಿಂತು ಗಬ್ಬು ನಾರುತ್ತಿದ್ದು, ಪ್ರದೇಶದ ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸುಮಾರು 1500ಕ್ಕೂ ಅಧಿಕ ಜನಸಂಖ್ಯೆಯುಳ್ಳ ಈ ಗ್ರಾಮದಲ್ಲಿ ಚರಂಡಿಯಲ್ಲಿ ಹೂಳು ತುಂಬಿದರೆ, ಮತ್ತೊಂದು ವಾರ್ಡ್‍ನಲ್ಲಿ ಚರಂಡಿ ನಿರ್ಮಾಣ ಮುಗಿಯದೇ ಅಪೂರ್ಣವಾಗಿದೆ. ಹೀಗಾಗಿ ಚರಂಡಿ ನೀರು ರಸ್ತೆಯ ಮೇಲೆ ನಿಂತು ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಚರಂಡಿ ಹಾಗೂ ರಸ್ತೆಯ ಮೇಲೆ ಬಿದ್ದ ತಗ್ಗು ಗುಂಡಿಗಳಲ್ಲಿ ಹೊಲಸು ನೀರು ನಿಂತಿದ್ದರಿಂದ ಇವು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.

ಸಕಾಲಕ್ಕೆ ಚರಂಡಿಯ ಹೂಳನ್ನು ತೆಗೆಸಬೇಕಾದ ಗ್ರಾಮ ಪಂಚಾಯಿತಿಯ ನಿರ್ಲಕ್ಷದಿಂದ ನೈರ್ಮಲ್ಯ ಸಮಸ್ಯೆಯಿಂದ ಗ್ರಾಮದ ಜನರು ಕಲುಷಿತ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ. ನೈರ್ಮಲ್ಯದ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ಜನತೆಗೆ ನೀರಿನ ಪೂರೈಕೆಯು ಸಮರ್ಪಕವಾಗಿಲ್ಲ.

ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲ. ಹೀಗಾಗಿ ಮಹಿಳೆಯರು ಬಹಿರ್ದೇಸೆಗೆ ಬಯಲು ಆಶ್ರಯ ಪಡುವಂತಾಗಿದೆ. ಕರ್ನಾಟಕದ ಗಡಿ ಭಾಗದಲ್ಲಿರುವ ಈ ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ಮಳೆ ನೀರು ಮನೆಯೊಳಗೆ ನುಗ್ಗುತ್ತಿವೆ. ಈ ಕುರಿತು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಕರಂಜಿ.ಕೆ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಪಂಚಾಯತ್ ಇಲಾಖೆ ಸಚಿವರೇ ಚುನಾವಣೆ ಬಂದಾಗ ಸ್ವಚ್ಛತೆ ಕುರಿತು ಮಾತಾನಾಡುವ ನೀವು ಈ ರೀತಿಯ ಸಮಸ್ಯೆಗಳ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ. ಚುನಾವಣಾ ಸಂಧರ್ಭದಲ್ಲಿ ಮಾತ್ರ ಜನರು ಬೇಕಾ? ಕೂಡಲೇ ಸಂಬಂಧ ಪಟ್ಟ ಅಧಿಕಾರಗಳ ಮೇಲೆ ಕ್ರಮಕೈಗೊಂಡು ಗ್ರಾಮದ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಆಗ್ರಹ.

ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ವರ್ಷಕ್ಕೆ ಒಮ್ಮೆ ಆದರೂ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿ. ನಿಮಗೆ ಸರ್ಕಾರ ಸಂಬಳ ನೀಡುವುದು ಜನರ ಸೇವೆ ಮಾಡುವುದಕ್ಕೆ ಆದರೆ ನೀವು ಈ ರೀತಿಯ ನಿರ್ಲಕ್ಷತನ ಮಾಡಿದರೆ ಜನರ ಬದುಕು ಬೀದಿಗೆ ಬರುತ್ತದೆ.

ಹಣಮಂತ ದೇಶಮುಖ ಯುವ ಅಧ್ಯಕ್ಷರು ಅಖಿಲ ಭಾರತ ವೀರಶೈವ ಮಹಾಸಭಾ ಔರಾದ(ಬಾ)