ಸಚಿವರೇ ನನ್ನನ್ನೊಮ್ಮೆ ನೋಡಿ …


 ನಿರೂಪಣೆ: ಎನ್.ವೀರಭದ್ರಗೌಡ
ಬಳ್ಳಾರಿ, ಜು.21: ನನ್ನ ಬಳಿಗೇ ಬಂದು ಸುತ್ತಮುತ್ತಲಿನ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವರೇ ನನ್ನನ್ನೊಮ್ಮೆ ಬಂದು ನೋಡಿ ಎನ್ನುತ್ತಿದೆ ಈ ಕಟ್ಟಡ.
ಮಾಜಿ ಸಚಿವ ಜನಾರ್ಧನರೆಡ್ಡಿ, ಹಾಲಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ತಮ್ಮ ತಂದೆ ತಾಯಿ ಗಾಲಿ ರುಕ್ಮಿಣಮ್ಮ ಚಂಗಾರೆಡ್ಡಿ ಅವರ ಸ್ಮರಣಾರ್ಥ ಸರ್ಕಾರಿ ವಾಣಿಜ್ಯ ಪದವಿ ಕಾಲೇಜನ್ನು ನಿರ್ಮಿಸಿದರು.
ಈ ಕಾಲೇಜಿನಲ್ಲಿ ಓದುವ ಬಡ ಪರಿಶಿಷ್ಟ, ಪಂಗಡದ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2013-14 ನೇ ಸಾಲಿನ  ಎಸ್ಸಿಪಿ , ಟಿಎಸ್ಪಿ ಅನುದಾನದಿಂದ ಭೂ ಸೇನಾ ನಿಗಮದಿಂದ ನನ್ನನ್ನು  ನಿರ್ಮಿಸಲಾಗಿದೆ.
ನಿರ್ಮಾಣಗೊಂಡು, ಸುಣ್ಣ ಬಣ್ಣ ಬಳಿದು, ವಿದ್ಯಾರ್ಥಿಗಳಿಗೆ ಮಂಚಗಳನ್ನು ತಂದು ಇರಿಸಲಾಗಿದೆ. ಇದಾಗಿ ಹಲವು ವರ್ಷಗಳೇ ಕಳೆದರೂ ನನ್ನ ಬಳಕೆ ಮಾತ್ರ ಆಗುತ್ತಿಲ್ಲ.
ದುಷ್ಕರ್ಮಿಗಳು ಈಗ ನನ್ನ ಕಿಡಕಿ ಗಾಜುಗಳನ್ನು ಹೊಡೆದು ಹಾಕಿದ್ದಾರೆ. ರಾತ್ರಿಯಾದರೆ ಎಣ್ಣೆ ತೆಗೆದುಕೊಂಡು ಬಂದು ಇಲ್ಲಿಯೇ ಕೂತು ಕುಡಿದು, ತಂದ ಬಾಟಲಿ ಹೊಡೆದು ಹಾಕಿ ಹೋಗುತ್ತಾರೆ.  ಇಷ್ಟೇ ಅಲ್ಲ ಇನ್ನ ಏನೇನೋ ನಡೆಯುತ್ತೆ ಹೇಳಲು ನಾಚಿಕೆ ಆಗುತ್ತೆ.
ನಗರದಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು ಬಾಡಿಗೆ ಕಟ್ಟಡದಲ್ಲಿ ಹಾಸ್ಟಲ್ ನಡೆಸುವ
ಸಮಾಜ ಕಲ್ಯಾಣ ಇಲಾಖೆಯಾಗಲಿ, ಹಿಂದುಳಿದ ವರ್ಗ ಇಲಾಖೆಯವರಾಗಲಿ ನನ್ನ ಬಳಕೆಗೆ ಮುಂದಾಗಿಲ್ಲ.
ಖಾಸಗಿ ಕಟ್ಟಡಗಳಿಗೆ ನೀಡುವ ಬಾಡಿಗೆಯನ್ನೇ ನನಗೆ ನೀಡಿದರೆ ನಮ್ಮ ಕಾಲೇಜಿನ ಅಭಿವೃದ್ಧಿಗಾದರೂ ಬಳಸಿಕೊಳ್ಳಬಹುದು.
ನನಗೆ ನೀರಿನ ಕೊರತೆ ಎಂಬ ಕಾರಣ ಅವರದ್ದು. ನಗರ ಪಾಲಿಕೆಯಿಂದ ಸಮರ್ಪಕ ನೀರಿನ ಸಂಪರ್ಕ ಇಲ್ಲ. ನನ್ನ ಸುತ್ತಮುತ್ತಲಿನ ಕಟ್ಟಡಗಳಿಗೆ ನೀರಿನ ಸಂಪರ್ಕ ನೀಡಿರುವಂತೆ ನನಗೂ ಸಂಪರ್ಕ ಕಲ್ಪಿಸಿ ಬಳಕೆ ಮಾಡಿದರೆ ಬಡ ವಿದ್ಯಾರ್ಥಿಗಳಿಗೆ ಸಹಕಾರ ಅಗುವುದಲ್ಲವೇ.
ಸಚಿವರೇ, ಜಿಲ್ಲಾಧಿಕಾರಿಗಳೇ  ನಿನ್ನೆ ನೀವು ನನ್ನ ಸುತ್ತಮುತ್ತ ನಡೆಯುವ ಕೋಟ್ಯಾಂತರ ರೂಪಾಯಿಗಳ  ಕಾಮಗಾರಿ ಪರಿಶೀಲನೆ ಮಾಡಿದಂತೆ.  ಆಲೋಚನೆ ಮಾಡಿ ನನ್ನ ಬಗ್ಗೆಯೂ ಒಮ್ಮೆ ಚಿಂತಿಸಿ.
ಇಂತಿ ನಿಮ್ಮ  ಹಾಸ್ಟಲ್  ಕಟ್ಟಡ