ಸಚಿವರೇ ಕೊಟ್ಟೂರು ಕಡೆ ಸ್ವಲ್ಪ ನೋಡ್ರಿ!


ಸಂಜೆ ವಾಣಿ ವಾರ್ತೆ
ವಿಶೇಷ ವರದಿ:ಕೊಟ್ರೇಶ್ ಉತ್ತಂಗಿ
ಕೊಟ್ಟೂರು, ಆ.12: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊಟ್ಟೂರು ಪಟ್ಟಣವಾಗಿದ್ದು, ಇದು  ತಾಲೂಕಾಗಿ ಸುಮಾರು ಏಳು ವರ್ಷ ಕಳೆದರೂ, ರೇಷ್ಮೆ, ರಿಜಿಸ್ಟರ್ ಆಫೀಸ್, ಕೃಷಿ ಇಲಾಖೆ ಇನ್ನು ಮುಂತಾದ ಇಲಾಖೆಗಳ ಕೆಲಸ ಕಾರ್ಯಗಳಿಗೆ ಕೂಡ್ಲಿಗಿಗೆ ಹೋಗಬೇಕಾದ ಪರಿಸ್ಥಿತಿಯನ್ನು ಇಲ್ಲಿನ ಜನತೆ ಎದುರಿಸುತ್ತಿದ್ದಾರೆ.
ಅಂದಿನ ವಕ್ಫ್ ಮತ್ತು ಹಜ್ ಖಾತೆಯ ಸಚಿವರು ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಕೊಟ್ಟೂರು ಪಟ್ಟಣಕ್ಕೆ ಭೇಟಿ ನೀಡಿ ಹೋಗಿದ್ರು, ಸಹ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ.
ನೂತನವಾಗಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರು ಮತ್ತು ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ.ಜೆಡ್ ಜಮೀರ್ ಅಹ್ಮದ್ ಖಾನ್  ಸಾಹೇಬ್ರು  ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸಲು  ಪ್ರವಾಸ ಕೈಗೊಂಡಿದ್ದು, ಹೊಸಪೇಟೆ,  ಹಗರಿಬೊಮ್ಮನಹಳ್ಳಿ, ಹಡಗಲಿ, ಕೂಡ್ಲಿಗಿ, ಹರಪನಹಳ್ಳಿ, ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ, ಈ  ಸಭೆಗಳಲ್ಲಿ ಕೊಟ್ಟೂರು ತಾಲೂಕನ್ನು ಕಡೆಗಣಿಸದೇ ಅಭಿವೃದ್ಧಿಗೆ ನಾಂದಿ ಹಾಡಬೇಕು  ಎಂಬುದು ಜನತೆಯ ಆಶಯವಾಗಿದೆ. 
ಕೊಟ್ಟೂರು ಹಗರಿಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣವಾಗಿದ್ದು, ಇಲ್ಲಿನ ಜನರಿಗೆ ವಾರಕ್ಕೆ ಒಂದು ಬಾರಿ ನೀರು ಸರಬರಾಜು ಆಗುತ್ತಿದ್ದು,  ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಅನೇಕ ವಾರ್ಡ್ಗಳಲ್ಲಿ 24*7 ನೀರಿನ ವ್ಯವಸ್ಥೆ ಮಾಡಿದ್ದು, ನೀರು ಸರಬರಾಜು ಇಲ್ಲದೇ ಸ್ಥಗಿತಗೊಂಡಿದೆ, ಈ ಪೈಪ್ ಲೈನ್ ವ್ಯವಸ್ಥೆ ಮಾಡಲಾಗಿದ್ದ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಹಾಗೂ ತಾಲೂಕಾಗಿ ಸುಮಾರು ಏಳು ವರ್ಷ ಗತಿಸಿದರೂ  ತಾಲೂಕು ಮಟ್ಟದ ರಿಜಿಸ್ಟರ್ ಆಫೀಸ್, ತಾಲೂಕು ಆಸ್ಪತ್ರೆ, ನ್ಯಾಯಾಲಯ, ಮಳೆ ಬಂದರೆ ಸಾಕು ಕೆಸರುಗದ್ದೆಯಂತೆ ಆಗುತ್ತಿರುವ ಬಸ್ ನಿಲ್ದಾಣ ಹೈಟೆಕ್ ಬಸ್ ಸ್ಟ್ಯಾಂಡ್ ಆಗಿ ನಿರ್ಮಾಣ ಮಾಡಬೇಕು,  ಕೊಟ್ಟೂರು ವಿದ್ಯಾರ್ಥಿಗಳ ಜ್ಞಾನದ ಕಾಶಿಯಂತೆ ಬೆಳೆಯುತ್ತಿದ್ದು, ಸೌಲಭ್ಯ ಕೊರತೆಯಿಂದಾಗಿ ಕುಂಠಿತಗೊಂಡಿದೆ. ಬಡ ಮಕ್ಕಳಿಗೆ ಸರ್ಕಾರಿ ಪದವಿ ಕಾಲೇಜ್, ಇಲ್ಲಿನ ರೈತರಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ  ಕೊಟ್ಟೂರು ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸುವ ಸವಾಲುಗಳು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಇದೆ.
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಕೊಟ್ಟೂರನ್ನು ಕಡೆಗಣಿಸದೆ ಅಭಿವೃದ್ಧಿಗೆ ಶ್ರಮಿಸಬೇಕು, ತಾಲೂಕಾಗಿ ಅನೇಕ ವರ್ಷಗಳಾದರೂ ಇಲ್ಲಿನ ಜನರು ತಾಲೂಕು ಮಟ್ಟದ ಇಲಾಖೆಗಳು ಇಲ್ಲದಿದ್ದರಿಂದ  ಕೃಷಿ ಇಲಾಖೆ, ಸಬ್ ರಿಜಿಸ್ಟರ್ ಆಫೀಸ್, ಇನ್ನು ಮುಂತಾದ ಇಲಾಖೆಗಳ ಕೆಲಸ ಕಾರ್ಯಗಳಿಗೆ ಕೂಡ್ಲಿಗಿ ಹೋಗಬೇಕಾದ ಪರಿಸ್ಥಿತಿಯನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ ಇದನ್ನು ಆದಷ್ಟು ಬೇಗ ನಿಯಂತ್ರಿಸಿ ತಾವುಗಳು ತಾಲೂಕು ಮಟ್ಟದ ಇಲಾಖೆಗಳನ್ನು ನಿರ್ಮಾಣ ಮಾಡಬೇಕು.
  ಎನ್. ಭರ್ಮಣ್ಣ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ