ಸಚಿವರು, ಶಾಸಕರು ಮಾಡಬಹುದಾದ ಕೆಲಸ ಪ್ರಧಾನಿಯಿಂದ ಮಾಡಿಸುತ್ತಿದ್ದಾರೆ: ಶಾಸಕ ಪ್ರಿಯಾಂಕ್ ಖರ್ಗೆ ಲೇವಡಿ

ಕಲಬುರಗಿ,ಜ.17:ಸಚಿವರು ಅಥವಾ ಶಾಸಕರು ವಿತರಿಸಬಹುದಾಗ ಹಕ್ಕುಪತ್ರ ವಿತರಣೆಗೆ ಪ್ರಧಾನಿಯನ್ನು ಕರೆಸುತ್ತಿದ್ದಾರೆ ಎಂದರೆ ಇವರು ಏನು ಕೆಲಸ ಮಾಡಿಲ್ಲವೆಂದೇ ಅರ್ಥ ಎಂದು ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.

ಕಲಬುರಗಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ‌ ಅವರು ಮಾತನಾಡುತ್ತಿದ್ದರು.

ನನಗಿರುವ ಮಾಹಿತಿ ಪ್ರಕಾರ ಈಗಾಗಲೇ ದಾಖಲಾತಿಗಳು ಇರುವವರಿಗೆ ಮತ್ತೆ ಹಕ್ಕುಪತ್ರ ವಿತರಣೆ ಮಾಡಿಸಲಿದ್ದಾರೆ. ಈ ಬಗ್ಗೆ ಸುಭಾಷ್ ರಾಠೋಡ್ ವಿವರವಾಗಿ ಮಾತನಾಡಿದ್ದಾರೆ. ಯಾರಿಗೆ ಹಕ್ಕುಪತ್ರ ವಿತರಿಸಿದರು ಎನ್ನುವ ಬಗ್ಗೆ ದಾಖಲಾತಿಯೊಂದಿಗೆ ಇನ್ನೆರಡು ದಿನದಲ್ಲಿ ಮಾತನಾಡಲಿದ್ದೇನೆ ಎಂದರು.

ಬಿಜೆಪಿ ಶಾಸಕ ಬವನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಮುರುಗೇಶ ನಿರಾಣಿ ಕಿತ್ತಾಡಿಕೊಂಡಿದ್ದಾರೆ. ನಿರಾಣಿಯವರ ಕುರಿತು ಯತ್ನಾಳ ಬಳಬಾರದ ಪದ ಬಳಸಿದ್ದಾರೆ. ಯತ್ನಾಳ ಕಾರು ಚಾಲಕನ ಹತ್ಯೆ ವಿಚಾರವನ್ನು ನಿರಾಣಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉತ್ತರವಾಗಿ ಯತ್ನಾಳ ತನಿಖೆ‌ ನಡೆಸುವಂತೆ ಸವಾಲಾಕಿದ್ದಾರೆ. ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ? ಎಂದು ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.

ಡ್ರಗ್ಸ್ ಹಗರಣದಲ್ಲಿ ಮಾಜಿ ಸಿಎಂ ಪುತ್ರ ಭಾಗಿಯಾಗಿದ್ದಾರೆ ಎಂದು ಕೂಡಾ ಯತ್ನಾಳ ಆರೋಪಿಸಿದ್ದಾರೆ. ಒಬ್ಬ ಯುವರಾಜನನ್ನು ರಕ್ಷಿಸಲು ವಿಡಿಯೋಗಳಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಯತ್ನಾಳ ಹೇಳಿದ್ದಾರೆ. ಯಾರು ಆ ಯುವರಾಜ? ಯಾವ ವಿಡಿಯೋಗಳು ಎನ್ನುವುದರ ಬಗ್ಗೆ ತನಿಖೆಯಾಗಲಿ ಎಂದು ಪ್ರಿಯಾಂಕ್ ಒತ್ತಾಯಿಸಿದರು. ಸ್ಯಾಂಟ್ರೋ‌ ರವಿ ಭಾಗಿಯಾಗಿದ್ದಾರೆ ಎನ್ನಲಾದ ಹಗರಣಗಳ ಬಗ್ಗೆ ಮಾತನಾಡಿರುವ ಯತ್ನಾಳ‌ ಅವನಿಗೆ ಏನೂ ಆಗಲ್ಲ ಅಂದಿದ್ದಾರೆ. ಪ್ರಭಾವಶಾಲಿಗಳೆಲ್ಲ‌ ಅವನ ಜೇಬಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ನಾನು ಲಂಚ ಮಂಚದ ಸರ್ಕಾರ ಎಂದಾಗ ನನ್ನ ಮೇಲೆ ಕಾಂಗ್ರೆಸಿಗರು ಗರಂ ಆಗಿದ್ದರು ಈಗ ಸಿಎಂ ಕಚೇರಿಯಲ್ಲಿ ಹನಿ ಟ್ಯಾಪ್ ಆಗಿರುವುದು ಸುಳ್ಳಾ ? ಸಚಿವರೊಬ್ಬರಿಗೆ ಯತ್ನಾಳ ಅಸಭ್ಯ ಪದ ಬಳಸಿದ್ದಾರೆ ಅದು ಸುಳ್ಳಾ? ಸ್ಯಾಂಟ್ರೋ ರವಿ ಅರೆಸ್ಟ್ ಆಗಿರುವುದು ಸುಳ್ಳಾ? ಡ್ರಗ್ ದಂಧೆಯ ಬಗ್ಗೆ ಎಷ್ಟೆಲ್ಲ ಹೇಳಿದರಲ್ಲ ಈಗ ಏನಾಗಿದೆ? ತನಿಖೆ ಎಲ್ಲಿಗೆ ಬಂತು ? ಯತ್ನಾಳ ಹೇಳಿಕೆಯನ್ನು‌ ಯಾರೊಬ್ಬರು ಅಲ್ಲಗಳೆದಿಲ್ಲವಲ್ಲ ಯಾಕೆ ? ಸರ್ಕಾರ ನಡೆಸುತ್ತಿರುವವರ ವಿಡಿಯೋಗಳಿವೆ ಎನ್ನಲಾಗುತ್ತಿದೆ ಈ ಬಗ್ಗೆ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದು ಅವರು ಆಗ್ರಹಿಸಿದರು.

ಚಿತ್ರದುರ್ಗ ದ ಶಾಸಕ ತಿಪ್ಪಾರೆಡ್ಡಿ ವಿರುದ್ದ ರೂ 90 ಲಕ್ಷ ಕಮೀಷನ್ ಬೇಡಿಕೆ ಇಟ್ಟಿರುವುದಾಗಿ ಕಾಂಟ್ರಾಕ್ಟರ್ ಸಂಘದ ಅಧ್ಯಕ್ಷ ಮಂಜುನಾಥ ಆರೋಪ ಮಾಡಿ ಲೋಕಾಯುಕ್ತರಿಗೆ ಸಲ್ಲಿಸಲಿರುವ ಅರ್ಜಿಯಲ್ಲಿ ಅಫಡವಿಟ್ ಹಾಕುತ್ತಿದ್ದಾರೆ. ಈ ಹಿಂದೆಯೂ ಕೂಡಾ ಗುತ್ತಿಗೆದಾರರ ಸಂಘ ಸರ್ಕಾರ ಮೇಲೆ 40% ಕಮಿಷನ್ ಆರೋಪ ಮಾಡಿ ಪ್ರಧಾನಿಗೆ, ಸಿಎಂ ಗೆ ಪತ್ರ ಬರೆದಿತ್ತು. ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರ ಬಳಿ ಗುತ್ತಿಗೆದಾರರು ಬಂದು ಮನವಿ ಸಲ್ಲಿಸಿದ್ದರು. ಸರ್ಕಾರ ಕಮಿಷನ್ ಹೊಡೆಯುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಏನಿರುತ್ತದೆ. ಪಿಎಸ್ವೈ ಹಗರಣ, ಗುತ್ತಿಗೆ ದಾರರ ಕಮಿಷನ್ ಆರೋಪ, ಡ್ರಗ್ ದಂಧೆಯ ಹಗರಣ ಸೇರಿದಂತೆ ಸರ್ಕಾರದ ವಿರುದ್ದದ ಆಪಾದನೆಗಳ ಸಮಗ್ರ ತನಿಖೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತ್ವರಿತಗತಿ ನ್ಯಾಯಾಲಯ ಸ್ಥಾಪನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ‌ಯೋಜನೆಗಳ ಬಗ್ಗೆ ಕಲಬುರಗಿ ಜಿಲ್ಲೆ ಉಸ್ತುವಾರಿ ಎನ್ ರವಿಕುಮಾರ ಹಾಗೂ ಇತರ ಬಿಜೆಪಿಯವರ ಟೀಕೆಗಳ ಬಗ್ಗೆ ಉತ್ತರಿಸಿದ ಪ್ರಿಯಾಂಕ್ ನಮ್ಮ ಸರ್ಕಾರ ಅಧಿಕಾರಕ್ಕೆ‌ ಬರಲಿ ಆಮೇಲೆ ನಾವು ಅದನ್ನು ಸಾಧಿಸಿ ತೋರಿಸುತ್ತೇವೆ.‌ ಈ ಹಿಂದೆ ಆರ್ಟಿಕಲ್ 371(j) ಅಸಾಧ್ಯ ಎಂದು ಬಿಜೆಪಿಗರು ಹೇಳಿದ್ದರು ಅದನ್ನು ಮಾಡಿ ತೋರಿಸಿಲ್ಲವೇ? ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ 600 ಘೋಷಣೆ ಮಾಡಿದ್ದರು ಅವುಗಳಲ್ಲಿ 20 % ಪ್ರಣಾಳಿಕೆ‌ ಭರವಸೆ ಈಡೇರಿಸಿದ್ದಾರೆಯೇ ? ಎಂದರು.

ನೆಟೆ ರೋಗಕ್ಕೆ ವಿಶೇಷ ಪ್ಯಾಕೇಜ್ ಕೊಡುತ್ತೀರಾ ಇಲ್ವಾ ? ನೆಟೆರೋಗದ‌ ಹಾನಿಯಿಂದಾಗಿ‌ಸುಮಾರು 8 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಯಾವಾಗ ಕೊಡುತ್ತೀರಾ? ಕೋಲಿ ಕಬ್ಬಲಿಗೆ ಸಮಾಜವನ್ನು ಎಸ್ ಟಿ ಸೇರಿಸುವ ಭರವಸೆ ಏನಾಗಿದೆ? ಇದನ್ನು ಯಾವಾಗ ಮಾಡುತ್ತೀರಾ? ಒಳಮೀಸಲಾತಿ ಹಾಗೂ ಮೀಸಲಾತಿ‌ ಏರಿಸುವ ಕುರಿತಂತೆ ನ್ಯಾ. ಸದಾಶಿವ ಆಯೋಗ ಹಾಗೂ ನ್ಯಾ.ನಾಗಮೋಹನದಾಸ ವರದಿ ಜಾರಿಗೆಗೊಳಿಸುವುದು ಯಾವಾಗ ? ಎನ್ನುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರಿಂದ ಯಾವಾಗ ಉತ್ತರ ಕೊಡಿಸುತ್ತೀರಾ ಎಂದು‌ ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.

ಹೇಗೂ ಪ್ರಧಾನಿ ಬರುತ್ತಿದ್ದಾರೆ ರೇಲ್ವೆ ವಲಯ ಸ್ಥಾಪನೆ ಸೇರಿದಂತೆ ಕಲಬುರಗಿಗೆ ಜಾರಿಯಾಗಿ ವಾಪಸ್ ಹೋದ ಹಲವಾರು ಯೋಜನೆಗಳ ಮರು ಮಂಜೂರಾತಿ ಕುರಿತಂತರ ಮೋದಿಯವರಿಗೆ ಒತ್ತಾಯಿಸುವಂತೆ ಸ್ಥಳೀಯ ಬಿಜೆಪಿ ನಾಯಕರಿಗೆ ಹೇಳಿದರು. ಒಂದು ವೇಳೆ ನಿಮಗೆ ಅವರನ್ನು‌ ಕೇಳುವ ಧೈರ್ಯವಿಲ್ಲದಿದ್ದರೆ ನಮ್ಮನ್ನು ಆವ್ಹಾನಿಸಿ ನಾವು ಕೇಳುತ್ತೇವೆ. ಬೇಕಾದರೆ‌ ನಾವು ನೀವೂ ಸೇರಿಯೇ ಕೇಳೋಣ ಎಂದರು.

ನಮ್ಮ ಸರ್ವೆಗಳ ಪ್ರಕಾರ ನಾವು 130 ಸೀಟು ಗೆಲ್ಲುತೇವೆ. ಸಿಎಂ ಪ್ರಕಾರ ಅವರು‌ 106 ಸೀಟು ಬರುತ್ತದೆ. ಹಾಗಾದರೆ ನಮ್ಮ ಪಕ್ಷ ಅಧಿಕಾರಕ್ಕೆ‌ ಬರುತ್ತದೆ. ಈಗಾಗಲೇ ಜಗದೀಶ ಶೆಟ್ಟರ್ ಅವರಿಗೆ ಸೈಡಿಗೆ ಸರಿಸಲಾಗಿದೆ.ಈಗ ಬಿಎಸ್ ವೈ ಮುಕ್ತ್ ಬಿಜೆಪಿಯನ್ನು ಬಿಜೆಪಿಗರೇ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಪಿಎಂ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನ ಕರೆ ತರದಿದ್ದರೆ ಕ್ರಮ ಕೈಗೊಳ್ಳುವುದಾಗಿ ಪಿಡಿಓ ಹಾಗೂ ಅಂಗನವಾಡಿ ಕಾರ್ಯಕರ್ತೆಯವರನ್ನು ಹೆದರಿಸಲಾಗುತ್ತಿದೆ ಇದು ಸರಿಯಲ್ಲ ಎಂದರು.

ಮೋದಿ ಬರುತ್ತಿರುವುದರಿಂದಾಗಿ ಕಾಂಗ್ರೆಸ್ ಗೆ ನಡುಕ‌ ಶುರುವಾಗಿದೆ ಎಂದು ಬಿಜೆಪಿಗರು ಹೇಳಿದ್ದಾರೆ. ಬದಲಿಗೆ ಅವರಿಗೆ ನಡುಕ ಶುರುವಾಗಿದೆ. ಸರ್ಕಾರದ ಭ್ರಷ್ಟಾಚಾರ, ಕಮಿಷನ್ ಆರೋಪ, ಯತ್ನಾಳ- ನಿರಾಣಿ ಜಟಾಪಟಿ, ನೆಟೆರೋಗದ‌ ಕುರಿತು ಪ್ರಧಾನಿ ಕೇಳಿ ಯಾರಿಗೆ ಕ್ಲಾಸ್ ತೆಗೆದುಕೊಳ್ಳುವರು ಎಂದು ಹೆದರಿ ಬಿಜೆಪಿಗರಿಗೆ ನಡುಕ ಶುರುವಾಗಿದೆ ಎಂದು ತಿರುಗೇಟು ನೀಡಿದರು.