ಸಚಿವರು- ಗೋವಾ ಸಿ.ಎಂ. ಭೇಟಿ: ಅನ್ಯ ಅರ್ಥ ಬೇಡ- ಸತೀಶ್


ಹುಬ್ಬಳ್ಳಿ,ಡಿ.2: ತೆಲಂಗಾಣ ಚುನಾವಣೆ ವೇಳೆ ಕರ್ನಾಟಕದ ಪ್ರಭಾವಿ ಸಚಿವರು ಹಾಗೂ ಗೋವಾ ಸಿ.ಎಂ. ಭೇಟಿ ವಿಚಾರ ಕುರಿತಂತೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ನಾಯಕರೇನೂ ಶತ್ರುಗಳಲ್ಲ, ಈ ಪಕ್ಷದಿಂದ ಆ ಪಕ್ಷಕ್ಕೆ, ಆಪಕ್ಷದಿಂದ ಈ ಪಕ್ಷಕ್ಕೆ ಹೋಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿರುತ್ತಾರೆ. ಹೀಗಾಗಿ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ನುಡಿದರು.
ಅವರವರ ನಡುವೆ ಸ್ನೇಹವಿರುತ್ತದೆ, ಭೇಟಿಯಾಗಿರುತ್ತಾರೆ, ಇಲ್ಲಿಯೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ಸ್ನೇಹಿತರಿದ್ದಾರೆ. ಬೇರೆ ಬೇರೆ ಪಕ್ಷದವರು ನಮ್ಮನ್ನು ಭೇಟಿಯಾಗುತ್ತಾರೆ, ಇದರಲ್ಲಿ ಬೇರೆ ಅರ್ಥವಿಲ್ಲ ಎಂದವರು ಸ್ಪಷ್ಟವಾಗಿ ಹೇಳಿದರು.
ಸಚಿವರು ಹಾಗೂ ಶಾಸಕರ ನಡುವೆ ಹೊಂದಾಣಿಕೆ ಇಲ್ಲವೆಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುತ್ತ, ಚಳಿಗಾಲದ ಅಧಿವೇಶನ ಬಂದಿದೆ, ಆ ಅಧಿವೇಶನದಲ್ಲಿಯೇ ಅದಕ್ಕೆ ಉತ್ತರ ಸಿಗುತ್ತದೆ ಎಂದು ಅವರು ಹೇಳಿದರು.