ಸಚಿವರು-ಅಭ್ಯರ್ಥಿಗಳ ಜತೆ ವರಿಷ್ಠರ ಸಭೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಮಾ. ೨೧- ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಇಂದು ಸಂಜೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಎಲ್ಲ ಅಭ್ಯರ್ಥಿಗಳ ಹಾಗೂ ಸಚಿವರುಗಳ ಸಭೆ ನಡೆಸಿ, ಚುನಾವಣಾ ರಣತಂತ್ರಗಳ ಬಗ್ಗೆ ಚರ್ಚೆ ನಡೆಸುವರು.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ೨೪ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಿದ್ದು, ನಾಲ್ಕು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಯ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಅಭ್ಯರ್ಥಿಗಳ ೨ನೇ ಪಟ್ಟಿ ಇಂದು ಸಂಜೆಯೊಳಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಸುರ್ಜೇವಾಲ ಅವರ ಸಭೆಗೆ ಬರುವಂತೆ ಕಾಂಗ್ರೆಸ್ ಪಕ್ಷದಿಂದ ಸಂದೇಶವನ್ನು ರವಾನಿಸಲಾಗಿದೆ.ಇಂದಿನ ಸಭೆಯಲ್ಲಿ ಅಭ್ಯರ್ಥಿಗಳ ಜತೆ ರಾಜ್ಯದ ಎಲ್ಲ ಸಚಿವರುಗಳು ಪಾಲ್ಗೊಳ್ಳಲಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಈ ಸಭೆಯಲ್ಲಿ ಚುನಾವಣಾ ಗೆಲುವಿನ ರಣತಂತ್ರಗಳ ಬಗ್ಗ ಸಮಾಲೋಚನೆ ನಡೆಸುವರು.ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಜತೆ ಒಗ್ಗೂಡಿ ಪಕ್ಷದ ಗೆಲುವಿಗೆ ಕೆಲಸ ಮಾಡುವಂತೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೂ ರಣದೀಪ್ ಸಿಂಗ್ ಸುರ್ಜೇವಾಲ ಈ ಸಭೆಯಲ್ಲಿ ಸೂಚನೆಯನ್ನು ನೀಡುವರು ಎಂದು ಹೇಳಲಾಗಿದೆ.
ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕ ಕಾರ್ಯತಂತ್ರ
ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಕಾಂಗ್ರೆಸ್ ಪಕ್ಷ ಪ್ರತ್ಯೇಕವಾದ ಕಾರ್ಯತಂತ್ರಗಳನ್ನು ರೂಪಿಸಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸುರ್ಜೇವಾಲ ಕೆಲವು ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.ಕಳೆದ ಎರಡು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದು, ೨೪ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿದೆ.ಈ ಎಲ್ಲ ೨೪ ಅಭ್ಯರ್ಥಿಗಳಿಗೂ ದೂರವಾಣಿಯಲ್ಲೇ ಟಿಕೆಟ್ ನೀಡುವ ಸಂದೇಶವನ್ನು ರವಾನಿಸಿ, ವರಿಷ್ಠರು ಅಭಿನಂದನೆಗಳ ಹೇಳಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಇಂದು ಸಂಜೆಯೊಳಗೆ ಬಿಡುಗಡೆಯಾಗುತ್ತದೆ.
೪ ಕ್ಷೇತ್ರಗಳಿಗೆ ಪೈಪೋಟಿ:ಸುರ್ಜೆವಾಲ ಸಭೆ
ನಾಲ್ಕು ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಆಯ್ಕೆಯಲ್ಲಿ ಪೈಪೋಟಿ ಇದ್ದು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬಳ್ಳಾರಿ ಕ್ಷೇತ್ರಗಳ ಟಿಕೆಟ್‌ಗೆ ಭಾರಿ ಪೈಪೋಟಿ ಇದ್ದು, ಈ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇನ್ನೂ ಪೂರ್ಣಗೊಂಡಿಲ್ಲ.
ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಅಭ್ಯರ್ಥಿಗಳು ಮತ್ತು ಸಚಿವರುಗಳ ಸಭೆಗೂ ಮುನ್ನ ಸುರ್ಜೇವಾಲ ಅವರು ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಜತೆ ಅಂತಿಮ ಸುತ್ತಿನ ಚರ್ಚೆ ನಡೆಸಿ ಪಟ್ಟಿಗೆ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸುವರು. ಅಗತ್ಯವಿದ್ದರೆ ಈ ನಾಲ್ಕು ಕ್ಷೇತ್ರಗಳ ಸ್ಥಳೀಯ ಮುಖಂಡರ ಜತೆ ಸುರ್ಜೇವಾಲ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.
ಈ ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಂದು ಸಂಜೆಯೊಳಗೆ ಬಿಡುಗಡೆಯಾಗಲಿದೆ.
ರಾಜ್ಯದಲ್ಲೇ ಮೊಕ್ಕಾಂ
ಇಂದು ಮಧ್ಯಾಹ್ನ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವ ಸುರ್ಜೇವಾಲ ಅವರು ೨-೩ ದಿನ ರಾಜ್ಯದಲ್ಲೇ ಮೊಕ್ಕಾಂ ಹೂಡಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಭುಗಿಲೆದ್ದಿರುವ ಅಸಮಾಧಾನ, ಅತೃಪ್ತಿಗೆ ಪರಿಹಾರ ರೂಪಿಸುವ ಕೆಲಸವನ್ನು ಮಾಡವರು.
ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವವರನ್ನು ಕರೆಸಿ ಮಾತನಾಡಿ, ಎಲ್ಲ ಅಸಮಧಾನಿತರ ಮುನಿಸನ್ನು ಶಮನ ಮಾಡುವ ಕೆಲಸವನ್ನು ಮುಂದಿನ ೨-೩ ದಿನಗಳಲ್ಲಿ ಸುರ್ಜೇವಾಲ ಮಾಡುವರು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.