ಮಾತು ಕೇಳದ ಅಧಿಕಾರಿಗಳು ಸಿಎಂಗೆ ರಾಯರೆಡ್ಡಿ ಮೊರೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೨:ಸಚಿವರುಗಳು ತಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆಸಿದ್ದ ಶಾಸಕರುಗಳು ಈಗ ಸಚಿವರಿರಲಿ ಅಧಿಕಾರಿಗಳು ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದು ಅಧಿಕಾರಿಗಳು ತಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.ಕಳೆದ ತಿಂಗಳು ಬಸವರಾಜರಾಯರೆಡ್ಡಿ ಸೇರಿದಂತೆ ಹಲವು ಹಿರಿಯ ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಚಿವರುಗಳು ತಮ್ಮ ಮಾತು ಕೇಳುತ್ತಿಲ್ಲ, ಶಾಸಕಾಂಗ ಪಕ್ಷ ಸಭೆ ಕರೆಯುವಂತೆ ಮನವಿ ಮಾಡಿದ್ದರು, ಅದರಂತೆ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದು ಸಚಿವರುಗಳು ಶಾಸಕರ ಕೆಲಸ ಮಾಡುವಂತೆ ಸೂಚನೆ ನೀಡಿದ್ದರು. ಹಾಗೆಯೇ ಯಾವುದೇ ಶಾಸಕರು ಸಮಸ್ಯೆಗಳಿದ್ದರೆ ನನ್ನನ್ನು ಸಂಪರ್ಕಿಸಿ, ಬಹಿರಂಗವಾಗಿ ಮಾತನಾಡುವುದು ಬೇಡ ಎಂದು ಹೇಳಿದ್ದರು. ಇಷ್ಟೆಲ್ಲಾ ಆದರೂ ಮತ್ತೆ ಹಿರಿಯ ಶಾಸಕರಾದ ಬಸವರಾಜರಾಯರೆಡ್ಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಜೆಸ್ಕಾಂನ ಅಧಿಕಾರಿಗಳು ತಮ್ಮ ಮಾತನ್ನು ಕೇಳುತ್ತಿಲ್ಲ. ಇಂಧನ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಶಾಸಕರು ಸಮಸ್ಯೆ ಹೇಳಿಕೊಳ್ಳುವುದು ಅಸಮಾಧಾನ ಅಲ್ಲ:ಡಿಕೆಶಿ
ಯಾವ ಶಾಸಕರಲ್ಲೂ ಅಸಮಾಧಾನ ಆಕ್ರೋಶ ಇಲ್ಲ ಅವರು ಸಮಸ್ಯೆಗಳನ್ನು ಹೇಳಿಕೊಂಡರೆ ತಪ್ಪೇನಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಸಚಿವರು ಹಾಗೂ ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಎಂದು ಹಿರಿಯ ಶಾಸಕ ಬಸವರಾಜರಾಯರೆಡ್ಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಬಗ್ಗೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ಯಾವ ಶಾಸಕರಲ್ಲೂ ಅಸಮಾಧಾನವಿಲ್ಲ, ಅವರ ಸಮಸ್ಯೆಗಳನ್ನು ಹೇಳಿಕೊಳ್ಳುವುದು ತಪ್ಪೇನಿಲ್ಲ ಅದನ್ನೇ ಶಾಸಕರ ಆಕ್ರೋಶ, ಅಸಮಾಧಾನ ಎಂದೆಲ್ಲ ಬಿಂಬಿಸಬೇಡಿ ಎಂದು ಡಿ.ಕೆ ಶಿವಕುಮಾರ್ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಶಾಸಕರು ಅವರದೇ ಆದ ಸಮಸ್ಯೆಗಳಿರುತ್ತವೆ ಅದನ್ನು ಹೇಳಬಾರದಾ. ಅದಕ್ಕೆ ಏನೇನೋ ಸೃಷ್ಟಿ ಮಾಡುವುದು ಬೇಡ, ಶಾಸಕರು ನೋವು ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಪಕ್ಷದಲ್ಲಿ ಶಿಸ್ತು ಇದೆ ಅದರಂತೆ ಎಲ್ಲರೂ ನಡೆದುಕೊಳ್ಳುತ್ತಿದ್ದಾರೆ ಎಂದರು.
ಜೆಸ್ಕಾಂ ವ್ಯಾಪ್ತಿಯಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಕೆಯಾಗುತ್ತಿಲ್ಲ. ತಾವು ಪ್ರತಿನಿಧಿಸುತ್ತಿರುವ ಯಲಬುರ್ಗ ಕ್ಷೇತ್ರವೊಂದಕ್ಕೆ ೨೦೦ ಟ್ರಾನ್ಸ್‌ಫಾರ್ಮರ್‌ಗಳ ಅಗತ್ಯವಿದೆ. ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ. ಇದರಿಂದ ರೈತರ ಜಮೀನುಗಳಿಗೆ ವಿದ್ಯುತ್ ನೀಡಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಹಾಗೂ ಇಂಧನ ಸಚಿವರ ಸಭೆ ಕರೆಯುವಂತೆಯೂ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸೂಕ್ತ ಕ್ರಮ
ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ಗಳಿಗೆ ನಷ್ಟವಾಗುತ್ತಿರುವುದು ನಮ್ಮ ಗಮನದಲ್ಲಿದೆ. ಈ ಸಂಬಂಧ ಸಾರಿಗೆ ಸಚಿವರೊಂದಿಗೆ ಸಭೆ ನಡೆಸಿ ಖಾಸಗಿ ಬಸ್ ಮಾಲೀಕರಿಗೆ ಯಾವ ರೀತಿಯ ನೆರವು ನೀಡಲು ಸಾಧ್ಯ ಎಂಬ ಬಗ್ಗೆ ತೀರ್ಮಾನಗಳನ್ನು ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಹೇಳಿದರು.