ಸಚಿವರಿಗೆ ರಾಹುಲ್ ನೀತಿ ಪಾಠ

ಜುಲೈ ೧೯ಕ್ಕೆ ಸಭೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧೫:ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಕಾಂಗ್ರೆಸ್ ಪಕ್ಷ ತಯಾರಿ ನಡೆಸಿದ್ದು, ರಾಜ್ಯದ ಸಚಿವರುಗಳಿಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಟಾಸ್ಕ್‌ಗಳನ್ನು ನಿಗದಿ ಮಾಡಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದು, ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಇದೇ ತಿಂಗಳ ೧೯ ರಂದು ರಾಜ್ಯದ ಸಚಿವರುಗಳ ಸಭೆಯಲ್ಲಿ ಎಲ್ಲರಿಗೂ ಲೋಕಸಭಾ ಚುನಾವಣೆಯ ಜವಾಬ್ದಾರಿಗಳನ್ನು ನಿಗದಿ ಮಾಡುವರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ದೆಹಲಿಯಲ್ಲಿ ಎಲ್ಲ ಸಚಿವರಿಗೂ ರಾಹುಲ್‌ಗಾಂಧಿ ಅವರು ನೀತಿಪಾಠ ಹೇಳಲು ಸಭೆಯನ್ನು ಜೂನ್ ೨೧ ರಂದು ನಿಗದಿ ಮಾಡಲಾಗಿತ್ತು. ಆ ಸಭೆ ಮುಂದೂಡಿದ ಹಿನ್ನೆಲೆಯಲ್ಲಿ ಇದೇ ತಿಂಗಳ ೧೯ ರಂದು ಬೆಂಗಳೂರಿನಲ್ಲೇ ಎಲ್ಲ ಸಚಿವರ ಸಭೆ ಕರೆಯಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ಸಿಂಗ್ ಸುರ್ಜೆವಾಲಾ, ಕೆ.ಸಿ ವೇಣುಗೋಪಾಲ್ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸಚಿವರುಗಳಿಗೆ ನೀತಿಪಾಠದ ಜತೆಗೆ ಮುಂದಿನ ಲೋಕಸಭಾ ಚುನಾವಣೆಗ ಜವಾಬ್ದಾರಿ ನಿಗದಿ ಮಾಡುವರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೨ ತಿಂಗಳಾಗುತ್ತಿದೆ. ಎಲ್ಲ ಸಚಿವರುಗಳು ತಮ್ಮ ಇಲಾಖೆಗಳಲ್ಲಿ ಜನಪರ ಕಾರ್ಯಕ್ರಮಗಳಿಗೆ ಆಧ್ಯತೆ ನೀಡಬೇಕು, ಜತೆಗೆ ಯಾವುದೇ ಭ್ರಷ್ಟಾಚಾರ, ವಿವಾದಗಳಿಗೆ ಎಡೆಯಾಗದಂತೆ ಕೆಲಸ ಮಾಡಿ. ವಿಪಕ್ಷಗಳಿಗೆ ಅಸ್ತ್ರ ಕೊಡುವುದು ಬೇಡ, ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ೨೦ ಸ್ಥಾನ ಗೆಲ್ಲುವ ಗುರಿಯೊಂದಿಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ರಾಹುಲ್‌ಗಾಂಧಿ ಎಲ್ಲರಿಗೂ ಕಿವಿಮಾತು ಹೇಳಲಿದ್ದಾರೆ ಎಂದು ಕಾಂಗ್ರೆಸ್‌ನ ಮೂಲಗಳು ಹೇಳಿವೆ.
ರಾಹುಲ್ ಅವರು ಬೆಂಗಳೂರಿನಲ್ಲಿ ಈ ತಿಂಗಳ ೧೭ ಮತ್ತು ೧೮ ರಂದು ನಡೆಯಲಿರುವ ದೇಶದ ಪ್ರತಿಪಕ್ಷಗಳ ನಾಯಕರುಗಳ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬರಲಿದ್ದು, ಆ ಸಂದರ್ಭದಲ್ಲೇ ಸಚಿವರುಗಳ ಸಭೆಯನ್ನು ಕರೆಯಲಾಗಿದೆ.