ಸಚಿವರಿಗೆ ಕೋವಿಡ್ ಸ್ಥಿತಿಗತಿ ವಿವರಿಸಿದ ಡಿ.ಸಿ

ಬೀದರ:ಮೇ.13: ಎರಡನೇ ಅಲೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಸದ್ಯದ ಕೋವಿಡ್-19 ಸ್ಥಿತಿಗತಿ ಮತ್ತು ಲಾಕ್‍ಡೌನ್ ಜಾರಿಗೆ ವಹಿಸಿದ ಕ್ರಮಗಳು ಸೇರಿದಂತೆ ಇನ್ನೀತರ ವಿಷಯಗಳ ಬಗ್ಗೆ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಮತ್ತೊಮ್ಮೆ ಮಾಹಿತಿ ಪಡೆದುಕೊಂಡರು.
ಕೋವಿಡ್ ಲಸಿಕೆ ಪಡೆಯಲು ನಗರಕ್ಕೆ ಆಗಮಿಸಿದ್ದ ವೇಳೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಚಿವರು ಕೆಲಹೊತ್ತು ಸಮಾಲೋಚನೆ ನಡೆಸಿದರು. ಕೋವಿಡ್ ಮತ್ತು ಲಾಕ್‍ಡೌನ್ ಕುರಿತಂತೆ ಸಚಿವರು ಸಮಗ್ರ ಚರ್ಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು, ಜಿಲ್ಲೆಯಲ್ಲಿ ಇದುವರೆಗೆ 4,45,257 ಜನರಿಗೆ ಕೊವಿಡ್ ಪರೀಕ್ಷೆ ನಡೆಸಲಾಗಿದೆ. 21,666 ಜನರಿಗೆ ಕೊವಿಡ್ ಪಾಜಿಟೀವ್ ದೃಢಪಟ್ಟಿದೆ. 17,880 ಜನರು ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಮೇ 11ರವರೆಗೆ 308 ಜನರು ಕೋವಿಡ್‍ನಿಂದ ನಿಧನರಾಗಿದ್ದಾರೆ. ಜಿಲ್ಲಾಡಳಿತವು ಅಗತ್ಯ ಕ್ರಮ ವಹಿಸಿದ್ದರಿಂದ ಇದೀಗ ಜಿಲ್ಲೆಯಲ್ಲಿ ಕೊವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಆದರು ಕೂಡ ಅಧಿಕಾರಿಗಳೊಂದಿಗೆ ಪ್ರತಿ ದಿನ ಸಭೆ ನಡೆಸಿ ಆಯಾ ಕಡೆಗಳಲ್ಲಿನ ಮಾಹಿತಿ ಪಡೆದು, ಪರಿಶೀಲಿಸಿ, ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ತಿಳಿಸಲಾಗುತ್ತಿದೆ. ಮೇ 24ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೆ ಆದೇಶಿಸಿ ಸಂಪೂರ್ಣ ಲಾಕ್‍ಡೌನ್‍ಗೆ ಕ್ರಮ ವಹಿಸಲಾಗಿದೆ. ಬ್ರಿಮ್ಸ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ 600 ರೋಗಿಗಳಿಗೆ ಅವಕಾಶ ಕಲ್ಪಿಸುವ ವ್ಯವಸ್ತೆ ಮಾಡಲಾಗಿದೆ. 14 ಕೆ.ಎಲ್.ಟ್ಯಾಂಕಿನ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ರೋಸ್ಟರ್ ಮಾಡಿ ಎಲ್ಲ ವೈದ್ಯರನ್ನು ಸೇವೆಯನ್ನು ಮೂರು ಶಿಪ್ಟಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಎಲ್ಲ ವಾರ್ಡಗಳಲ್ಲಿ ಕನಿಷ್ಟ ಎರಡು ಸಿಸಿ ಕ್ಯಾಮರಾಗಳನ್ನು ಇಟ್ಟು ಅದನ್ನು ವಾರರೂಮನಲ್ಲಿ ವೀಕ್ಷಿಸಲಾಗುತ್ತಿದೆ. ಮುಖ್ಯವಾಗಿ ಜಿಲ್ಲೆಯಲ್ಲಿಯೇ ಒಂದು ಸಿಲಿಂಡರ್ ರೀಫಿಲಿಂಗ್ ಯುನಿಟ್ ನಿರ್ಮಾಣ ಮಾಡಲಿಕ್ಕೆ ಕರ್ನಾಟಕ ಗ್ಯಾಸ್ ಏಜೇನ್ಸಿ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮೇ 22ರ ನಂತರ ಅದು ಬೀದರಗೆ ಬಂದ ಬಳಿಕ ಆಕ್ಸಿಜನ್‍ಗೆ ಯಾವುದೇ ರೀತಿಯ ಕೊರತೆಯಾಗುವುದಿಲ್ಲ. ಕೋವಿಡ್ ನಿಯಂತ್ರಣಕ್ಕಾಗಿ 50ಕ್ಕೂ ಹೆಚ್ಚು ಅಧಿಕಾರಿಗಳನ್ನೊಳಗೊಂಡು ಜಿಲ್ಲಾ ಕೋವಿಡ್ ವಾರ್ ರೂಮ್ ಸ್ಥಾಪಿಸಿ ಜನತೆಗೆ 24*7 ಸಮಯವೂ ಸ್ಪಂದಿಸಲಾಗುತ್ತಿದೆ. ರೆಮಡಿಸಿವರ್ ಇಂಜೆಕ್ಷನ್, ಬೆಡ್ ವ್ಯವಸ್ಥೆ ಲಭ್ಯತೆಯಂತಹ ಅನೇಕ ಮಾಹಿತಿಯನ್ನು ಕೋವಿಡ್ ವಾರ್ ರೂಮಿನಿಂದ ನೀಡಲಾಗುತ್ತಿದೆ. ವೈದ್ಯರು ಮತ್ತು ಸಿಬ್ಬಂದಿ ಖುದ್ದು ಕೋವಿಡ್ ಸೋಂಕಿತರ ಮನೆಗೆ ಭೇಟಿ ನೀಡಿ, ಎರಡು ರೂಮುಗಳಿದ್ದಲ್ಲಿ ಐಸೋಲೇಶನ್‍ಗೆ ವ್ಯವಸ್ಥೆ ಮಾಡುವ ಇಲ್ಲದಿದ್ದರೆ ಅವರನ್ನು ಕೋವಿಡ್ ಕೇರ್ ಹಾಸ್ಪಿಟಲ್‍ಗೆ ಕರೆತಂದು ಚಿಕಿತ್ಸೆ ಕೊಡಿಸುವ ವ್ಯವಸ್ತೆ ಜೊತೆಗೆ ಅವರಿಗೆ ತುರ್ತಾಗಿ ಬೇಕಿರುವ ಔಷದಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಹೋಮ್ ಐಸೊಲೇಶನ್‍ನಲ್ಲಿ ಇರುವವರ ಬಗ್ಗೆ ನಿರಂತರ ನಿಗಾ ವಹಿಸಲು, ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕಿತರು ಮನೆಯಲ್ಲಿಯೇ ಇದ್ದು ಸಹಕರಿಸಲು ಅವರಿಗೆ ನಾನಾ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಾರ್ಡಮಟ್ಟದಲ್ಲಿ ಕಾರ್ಯಪಡೆ ರಚಿಸಿ ಜನಪ್ರತಿನಿಧಿಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಸಹಕಾರ ಪಡೆದು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಪಾಜೀಟೀವ್ ಆಗಿ ಬಹಳಷ್ಟು ಜನರು ಬ್ರಿಮ್ಸ ಗೆ ಬರುತ್ತಿದ್ದರು. ಇದನ್ನು ಬದಲಾಯಿಸಲಾಗಿದೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಬೆಡ್, ವೆಂಟಿಲೇಟರ್ಸ, ಎಲ್ಲಾ ಕಡೆಗಳಲ್ಲಿ ಕನಿಷ್ಟ 50 ಆಕ್ಸಿಜನ್ ಬೆಡ್‍ಗಳಿವೆ. ಸ್ಥಳೀಯ ಸಿಸಿಸಿ, ಸಿಎಚ್‍ಸಿ ಸೆಂಟರಗಳನ್ನು ಬಳಕೆ ಮಾಡಬೇಕು. ಕಾಯಿಲೆ ತೀವ್ರ ಇದ್ದಾಗ ಮತ್ರ ಬ್ರಿಮ್ಸಗೆ ಆಗಮಿಸಬೇಕು ಎಂದು ಜನತೆಗೆ ಮನವರಿಕೆ ಮಾಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲಾಂಟಗಳನ್ನು ನಿರ್ಮಾಣ ಮಾಡಲಿಕ್ಕೆ ಕ್ರಮ ವಹಿಸಲಾಗುತ್ತಿದೆ. ಬ್ರಿಮ್ಸಗೆ 5 ಕೆ.ಎಲ್. ಆಕ್ಸಿಜನ್ ಟ್ಯಾಂಕನ್ನು ಉಚಿತವಾಗಿ ನೀಡಲು ಕೋಳಾರ್ ಇಂಡಸ್ಟ್ರಿನ ಸಾಯಿ ಫಾರ್ಮಾ ಮುಂದಾಗಿದ್ದಾರೆ ಎಂದು ಡಿ.ಸಿ ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಡಿಎಚ್‍ಓ ಡಾ.ವಿ.ಜಿ.ರೆಡ್ಡಿ, ಬ್ರಿಮ್ಸ ನಿರ್ದೇಶಕ ಡಾ.ಶಿವಕುಮಾರ ಹಾಗೂ ಇನ್ನೀತರರು ಈ ಸಂದರ್ಭದಲ್ಲಿ ಇದ್ದರು.