ಸಚಿವರಿಂದ ಸಂಕ್ರಾಂತಿ ಹಬ್ಬ ಆಚರಣೆ

ಔರಾದ :ಜ.15: ಮಾನವೀಯ ಸಂಬಂಧ ಬೆಸೆಯುವ ರೈತರ ಸುಗ್ಗಿ ಹಬ್ಬ, ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಪಶುಸಂಗೋಪನೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ತಮ್ಮ ಸ್ವಗ್ರಾಮವಾದ ಬೊಂತಿ ಗ್ರಾಮದ ತಮ್ಮ ನಿವಾಸದಲ್ಲಿ ಗ್ರಾಮಸ್ಥರ ಜೊತೆಗೂಡಿ ಮಕರ ಸಂಕ್ರಾಂತಿ ಹಬ್ಬವನ್ನು ಸರಳವಾಗಿ ಆಚರಿದರು.

ಗ್ರಾಮಸ್ಥರೊಂದಿಗೆ ಪರಸ್ಪರ ಎಳ್ಳು-ಬೆಲ್ಲ ಹಂಚಿಕೆ ಮಾಡಿ ಮಕರ ಸಂಕ್ರಾಂತಿಯ ಶುಭ ಕೋರಿ ಮಾತನಾಡಿದ ಸಚಿವರು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ ಹಾಗೂ ಕಳೆದ ವರ್ಷದ ಎಲ್ಲಾ ಕಹಿಗಳನ್ನು ಮರೆತು ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ವೃದ್ಧಿಸೋಣ. ವರ್ಷದ ಮೊದಲ ಹಬ್ಬ ಈ ಸಂಕ್ರಾಂತಿ, ಈ ಹಬ್ಬವು ಎಲ್ಲರ ಜೀವನದಲ್ಲಿ ಒಳಿತನ್ನು ತರಲಿ ಹಾಗೂ ಕೋವಿಡ್ ಮಾಹಾಮಾರಿ ಬೇಗ ತೊಲಗಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ಚವ್ಹಾಣ, ಶಿವಕುಮಾರ ಸಜ್ಜನಶೆಟ್ಟಿ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.