ಸಚಿವರಿಂದ ಕೋವಿಡ್ ಕಾಳಜಿ ಕೇಂದ್ರ ಉದ್ಘಾಟನೆ

ಧಾರವಾಡ,ಮೇ30: ಯಾದವಾಡ ಗ್ರಾಮದಲ್ಲಿರುವ ಎಸ್.ಡಿ.ಎಮ್.ಗ್ರಾಮೀಣ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಜಿಲ್ಲಾಡಳಿತವು ಆರಂಭಿಸಿರುವ ನೂತನ ಕೋವಿಡ್ ಕಾಳಜಿ (ಕೇರ್ ಸೆಂಟರ್) ಕೇಂದ್ರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಗದೀಶ ಶೆಟ್ಟರ್ ಅವರು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಜಿಲ್ಲೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕೋವಿಡ್-19 ನಿಯಂತ್ರಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್, ರೇಮಡಿಸೀವರ್ ಔಷಧಿಗಳು ನಿರಂತರವಾಗಿ ಲಭ್ಯವಾಗುವಂತೆ ಎಲ್ಲ ಕ್ರಮಕೈಗೊಳ್ಳಲಾಗಿದೆ ಎಂದರು.
ಗ್ರಾಮೀಣ ಜನರಿಗೆ ಸೋಂಕು ತಗುಲಿದಾಗ ಐಸೋಲೇಷನ್ ಮಾಡಲು ಪ್ರತ್ಯೇಕ ಕೋಣೆ ಇರುವುದಿಲ್ಲ. ಆದ್ದರಿಂದ ಹೋಬಳಿ ಮಟ್ಟದಲ್ಲಿ ಕೋವಿಡ್ ಕಾಳಜಿ ಕೇಂದ್ರಗಳನ್ನು ತೆರೆದು ಸೋಂಕಿತರಿಗೆ ಉಚಿತ ಊಟ, ಔಷಧಿ, ಚಿಕಿತ್ಸೆಯೊಂದಿಗೆ ಯೋಗ, ಆಟ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಎಲ್ಲ ಕಾಳಜಿ ಕೇಂದ್ರಗಳಲ್ಲಿ ಮೆಡಿಕಲ್ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ಆಶಾ ಕಾರ್ಯಕರ್ತರು ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರ ಆರೋಗ್ಯ ವಿಚಾರಿ ನಿಗಾವಹಿಸುತ್ತಿದ್ದಾರೆ. ಸೋಂಕಿತರಿಗೆ ಮನವೋಲಿಸಿ ಕಾಳಜಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಪಡೆಯಲು ತಿಳಿಸುತ್ತಿದ್ದಾರೆ. ಕೋವಿಡ್ ಮೊದಲನೆ ಅಲೆಯಲ್ಲಿ ಈ ಸೋಂಕು ಗ್ರಾಮೀಣ ಪ್ರದೇಶದಲ್ಲಿ ಅಷ್ಟೋ ಕಾಣಿಸಿಕೊಂಡಿರಲಿಲ್ಲ. ಆದರೆ ಕೋವಿಡ್ 2ನೆ ಅಲೆಯಲ್ಲಿ ಸೋಂಕು ಗ್ರಾಮೀಣ ಪ್ರದೇಶದಲ್ಲಿಯೂ ಹರಡುತ್ತಿದ್ದು, ಲಾಕ್‍ಡೌನ್‍ನಿಂದಾಗಿ ಈಗ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಕಳೆದ 8 ದಿನಗಳ ಹಿಂದೆ ಜಿಲ್ಲೆಯಲ್ಲಿ ಕೋವಿಡ್ ಪಾಜಿಟಿವಿಟಿ ದರ ಶೇ.30 ರಷ್ಟಿತ್ತು. ಆದರೆ ಈಗ ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪಾಜಿಟಿವಿಟಿ ದರ ಶೇ.16 ರಷ್ಟಾಗಿದೆ. ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸುಲಭವಾಗಿ ಲಭ್ಯವಾಗುತ್ತಿವೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಶಂಕರ ಪಾಟೀಲ ಮುನೆನಕೊಪ್ಪ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಉಪವಿಭಾಗಾಧಿಕಾರಿ ಡಾ.ಗೋಪಾಲ ಕೃಷ್ಣ.ಬಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಡಾ.ಶಶಿ ಪಾಟೀಲ, ತಹಶೀಲ್ದಾರ ಸಂತೋಷ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.