ಸಚಿನ್ ಹೆಸರಲ್ಲಿದ್ದ ದಾಖಲೆ ಮುರಿದ ಮುಶೀರ್

ಮುಂಬೈ,ಮಾ.೧೩- ಮುಂಬೈ ಬ್ಯಾಟ್ಸ್‌ಮನ್ ಮುಶೀರ್ ಖಾನ್ ರಣಜಿ ಟ್ರೋಫಿ ಫೈನಲ್‌ನಲ್ಲಿ ಅಗ್ರ ಫಾರ್ಮ್‌ನಲ್ಲಿದ್ದಾರೆ. ಮುಂಬೈ ಮತ್ತು ವಿದರ್ಭ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಮುಶೀರ್ ಖಾನ್ ಅದ್ಭುತ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಸುಮಾರು ೨೯ ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಇದ್ದ ದಾಖಲೆಯನ್ನು ಅಳಿಸಿದ್ದಾರೆ.ಇದೀಗ ರಣಜಿ ಟ್ರೋಫಿ ಫೈನಲ್‌ನಲ್ಲಿ ಮುಂಬೈ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಇವರ ಪಾಲಾಗಿದೆ.
ಅವರು ವಿದರ್ಭ ವಿರುದ್ಧ ಫೈನಲ್‌ನಲ್ಲಿ ೧೩೬ ರನ್ ಗಳಿಸಿದ್ದಾರೆ. ೩೨೬ ಎಸೆತಗಳಲ್ಲಿ ೧೦ ಬೌಂಡರಿಗಳ ನೆರವಿನಿಂದ ಶತಕ ಸಿಡಿಸಿದ್ದಾರೆ. ಈ ಮೂಲಕ ಮುಂಬೈ ಎರಡನೇ ಇನ್ನಿಂಗ್ಸ್‌ನಲ್ಲಿ ೫೦೦ ರನ್‌ಗಳ ಮುನ್ನಡೆ ಸಾಧಿಸಿದೆ. ಆದರೆ ರಣಜಿ ಟ್ರೋಫಿ ಫೈನಲ್‌ನಲ್ಲಿ ಶತಕ ಬಾರಿಸಿದ ಮುಂಬೈ ಯುವ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಮುಶೀರ್ ಖಾನ್ ಹೊಂದಿದ್ದಾರೆ. ಈ ಹಿಂದೆ ಆ ದಾಖಲೆ ಸಚಿನ್ ಹೆಸರಿನಲ್ಲಿತ್ತು. ಮುಶೀರ್ ಸಹೋದರ ಸರ್ಫರಾಜ್ ಖಾನ್ ಸದ್ಯ ಟೀಂ ಇಂಡಿಯಾ ಪರ ಆಡುತ್ತಿರುವ ಆಟಗಾರ.ಮುಂಬೈನ ಸ್ಟಾರ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸರ್ಫರಾಜ್ ಖಾನ್ ರಣಜಿ ಟ್ರೋಫಿಯಲ್ಲಿ ಅಬ್ಬರಿಸಿ, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಪದಾರ್ಪಣೆ ಮಾಡಿದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರಿಂದಲೂ ಸೈ ಎನಿಸಿಕೊಂಡಿರುವ ಸರ್ಫರಾಜ್ ಎಲ್ಲರ ಗಮನ ಸೆಳೆದಿದ್ದರು. ಇದೇ ಹಾದಿಯಲ್ಲಿ ಅವರ ಸಹೋದರ ಸಹ ದಾಪುಗಾಲು ಇಟ್ಟಿದ್ದಾರೆ.ಸರ್ಫರಾಜ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಕೂಡ ದೊಡ್ಡ ಸಾಧನೆ ಮಾಡಿದ್ದಾರೆ.
ಮುಶೀರ್ ಖಾನ್ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡುತ್ತಿದ್ದಾರೆ. ಮುಶೀರ್ ಖಾನ್ ೨೫೫ ಎಸೆತಗಳನ್ನು ಎದುರಿಸಿ ಶತಕ ಪೂರೈಸಿದರು. ಮುಶೀರ್ ಖಾನ್ ಅವರ ವಯಸ್ಸು ಅಂದರೆ ಮಾರ್ಚ್ ೧೨ ರಂದು ೧೯ ವರ್ಷ ೧೪ ದಿನಗಳು. ಇತ್ತೀಚೆಗೆ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸಚಿನ್ ತೆಂಡೂಲ್ಕರ್ ೧೯೯೪-೯೫ರಲ್ಲಿ ಮುಂಬೈ ಪರ ಆಡುತ್ತಿದ್ದಾಗ ರಣಜಿ ಟ್ರೋಫಿಯ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಶತಕ ಬಾರಿಸಿದ್ದರು. ಆಗ ಸಚಿನ್ ತೆಂಡೂಲ್ಕರ್ ಅವರಿಗೆ ೨೧ ವರ್ಷ. ಇಷ್ಟು ವರ್ಷ ಈ ದಾಖಲೆ ಸಚಿನ್ ಹೆಸರಲ್ಲೇ ಇತ್ತು. ಈಗ ಮುಶೀರ್ ಖಾನ್ ಅದನ್ನು ಮುರಿದಿದ್ದಾರೆ. ವಿಶೇಷವೆಂದರೆ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುತ್ತಿದ್ದಾಗ ಅವರೇ ವಾಂಖೆಡೆ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದಾರೆ.