ಸಕ್ರಿಯ ಸೋಂಕು ಪ್ರಕರಣ ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ

ಬೆಂಗಳೂರು,ಏ.೨೪- ಉದ್ಯಾನನಗರ ಈಗ ಕೊರೊನಾ ಸೋಂಕಿನ ಹಾಟ್‌ಸ್ಪಾಟ್ ಆಗಿ ಹೊರ ಹೊಮ್ಮಿದೆ. ಮುಂಬೈ, ದೆಹಲಿಯನ್ನು ಹಿಂದಿಕ್ಕಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನಕ್ಕೇರಿದೆ.
ದೇಶದಲ್ಲಿ ಕೊರೊನಾ ಸೋಂಕು ಬಿಗಡಾಯಿಸುವ ಹಂತ ತಲುಪಿರುವ ಬೆನ್ನಲ್ಲೆ ಸಕ್ರಿಯ ಪ್ರಕರಣಗಳನ್ನು ಹೊಂದಿದ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ದೊರೆತಿದೆ,
ನಿನ್ನೆ ಬೆಂಗಳೂರಿನಲ್ಲಿ ೧೬,೬೬೨ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದವು. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೪೯,೬೨೪ಕ್ಕೇರಿಕೆಯಾಗಿದೆ.
ಬೆಂಗಳೂರಿನ ನಂತರ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಜಿಲ್ಲೆ ಪುಣೆಗೆ ಸಂದಿದೆ. ಈ ಜಿಲ್ಲೆಯಲ್ಲಿ ೧.೧ ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು-ಪುಣೆ ಹೊರತುಪಡಿಸಿದರೆ ದೇಶದ ಉಳಿದೆಲ್ಲ ಜಿಲ್ಲೆಗಳಲ್ಲಿ ೧ ಲಕ್ಷದ ಸಮೀಪದಲ್ಲಿದ್ದು, ಮುಂಬೈ ೮೧,೧೭೪ ಸಕ್ರಿಯ ಪ್ರಕರಣಗಳನ್ನು ಹೊಂದಿದೆ.
ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಶೇ. ೭೦ ರಷ್ಟು ವೈರಾಣು ಬೆಂಗಳೂರು ಒಂದರಲ್ಲೇ ದಾಖಲಾಗುತ್ತಿರುವುದು ಪರಿಸ್ಥಿತಿಯ ಭೀಕರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಒಂದು ವೇಳೆ ಇದು ಹೀಗೆ ಮುಂದುವರೆದರೆ ಮೇ ೧ರೊಳಗೆ ಪ್ರತಿನಿತ್ಯ ಸೋಂಕಿನ ಪ್ರಕರಣಗಳು ೨೫ ಸಾವಿರಕ್ಕೆ ತಲುಪುವ ಭೀತಿ ಎದುರಾಗಿದೆ, ಈ ಪೈಕಿ ಶೇ. ೫ ರಷ್ಟು ಜನರಿಗೆ ತುರ್ತು ಸೇವೆ ಒದಗಿಸಬೇಕಾದರೂ ಪರಿಸ್ಥಿತಿ ಕಠಿಣವಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್‌ಬಾಬು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಸೋಂಕು ನಿಯಂತ್ರಣಕ್ಕೆ ವಾರಾಂತ್ಯ ಮತ್ತು ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಜನರು ಇದಕ್ಕೆ ಸಹಕರಿಸಲೇಬೇಕಾಗಿದೆ. ೨ನೇ ಅಲೆಯ ಸೋಂಕು ಕ್ಷಿಪ್ರ ಗತಿಯಲ್ಲಿ ಹರಡುತ್ತಿದ್ದು, ಜನರು ಮನೆಯಲ್ಲೇ ಇರಬೇಕಾದ ಪರಿಸ್ಥಿನಿ ನಿರ್ಮಾಣವಾಗಿದೆ
ನಿನ್ನೆ ರಾಜ್ಯದಲ್ಲಿ ೧೯೦ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಇಂದೂ ಕೂಡ ನಗರದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕು ಹೆಚ್ಚಾಗುವ ಭೀತಿ ತಲೆ ದೋರಿದೆ.