ಸಕ್ರಿಯ ರಾಜಕಾರಣಕ್ಕೆ ಬಿಎಸ್‌ವೈ ನಿವೃತ್ತಿ

ಬೆಂಗಳೂರು, ಜು. ೨೨- ತಮ್ಮ ಪುತ್ರ ವಿಜಯೇಂದ್ರ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ರಾಜಕೀಯ ನಿವೃತ್ತಿ ಸುಳಿವು ನೀಡಿದ್ದಾರೆ.
ಶಿಕಾರಿಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಿಕಾರಿಪುರವನ್ನು ಖಾಲಿ ಮಾಡುತ್ತಿದ್ದು, ನನ್ನ ಪುತ್ರ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
೨೦೨೩ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿರುವ ಹಿರಿಯ ನಾಯಕರುಗಳಿಗೆ ಟಿಕೇಟ್ ಸಿಗುವುದು ಅನುಮಾನ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲವು ಬಿಜೆಪಿ ಹಿರಿಯ ನಾಯಕರುಗಳು ತಮ್ಮ ಪುತ್ರರಿಗೆ ಟಿಕೆಟ್ ದೊರಕಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಹೈಕಮಾಂಡ್ ಮೇಲೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಈ ಹಿಂದೆ ಆಪರೇಷನ್ ಕಮಲದ ಬಳಿಕ ನಡೆದ ಉಪಚುನಾವಣೆಯಲ್ಲಿ ಕೆ.ಆರ್ ಪೇಟೆಯಲ್ಲಿ ವಿಜಯೇಂದ್ರ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ಕೆ.ಆರ್ ಪೇಟೆಯಿಂದ ವಿಜಯೇಂದ್ರ ಅವರು ಸ್ಪರ್ಧೆ ಮಾಡುತ್ತಾರೆ ಅಂತ ಊಹಿಸಲಾಗುತಿತ್ತು, ಆದರೆ ಈಗ ವಿಜಯೇಂದ್ರ ಅವರಿಗೆ ಶಿಕಾರಿ ಪುರದಿಂದ ಅಧಿಕೃತವಾಗಿ ಟಿಕೆಟ್ ನೀಡುವ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪನವರು ಹೇಳಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಸದ್ಯ ಬಿ.ಎಸ್. ಯಡಿಯೂರಪ್ಪನವರು ಶಿಕಾರಿಪುರದಿಂದ ಸ್ಪರ್ಧೆ ಮಾಡದೇ ಇರುವುದು ಅವರ ರಾಜಕೀಯ ವಿಶ್ರಾಂತಿ ಸೂಚನೆ ಎನ್ನಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಂದ ಹೆಚ್ಚು ಮಾಹಿತಿ ನೀಡಲಿದ್ದಾರೆಯೇ ಕಾದು ನೋಡಬೇಕಿದೆ.