ವಿಜಯನಗರ
ಹೊಸಪೇಟೆ ಜು.17: ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಹಯೋಗದೊಂದಿಗೆ ಜಿಲ್ಲಾ ಮಟ್ಟದಲ್ಲಿ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಜಾಥಾ ಹಮ್ಮಿಕೊಳ್ಳಲಾಯಿತು.
ಸೋಮವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಆವರಣದಲ್ಲಿ ಆರಂಭಗೊಂಡ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಶಿವ ಪ್ರಭು ಬಿ. ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಕ್ಷಯ ರೋಗ ಕಾಣಿಸಿಕೊಳ್ಳುವ ಸಂಭವ ಹೆಚ್ಚಿರುತ್ತದೆ. ಮುಖ್ಯವಾಗಿ ಮಧುಮೆಹಿಗಳು, ಹೆಚ್‍ಐವಿ ಸೊಂಕಿತರು, ಕ್ಷಯರೋಗಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವವರು ಹಾಗೆಯೇ ಕಳೆದ ಎರಡು ವರ್ಷಗಳ ಹಿಂದೆ ಕ್ಷಯರೋಗಕ್ಕೆ ಚಿಕಿತ್ಸೆ ಪಡೆದು ಗುಣಮುಖ ಆಗಿರುವವರಿಗೆ ಮತ್ತೊಮ್ಮೆ ಕ್ಷಯರೋಗ ಮರುಕಳಿಸುವ ಅಪಾಯ ಹೆಚ್ಚು ಇದ್ದು, ಈ ಬಗ್ಗೆ ಜಾಗೃತಿ ವಹಿಸಬೇಕು ಎಂದರು.
ಇದೇ ರೀತಿ ಕಲ್ಲುಕೋರೆ, ಗಣಿಗಾರಿಕೆ, ಕಾರ್ಖಾನೆ ಹಾಗೂ ಕೈಗಾರಿಕೆಗಳು, ಕೊಳಚೆ ಪ್ರದೇಶ, ವಲಸಿಗರು, ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಆರೋಗ್ಯ ಸೇವೆ ವಂಚಿತ ಜನರು, ಸಾರಿಗೆ ವ್ಯವಸ್ಥೆ ಇಲ್ಲದೇ ತಲುಪಲಾಗದ ಹಳ್ಳಿಗಳು, ಸಂಪ್ರದಾಯವಾದಿಗಳು, ಕಳೆದ ಎರಡು ವರ್ಷಗಳಲ್ಲಿ ಅತೀ ಹೆಚ್ಚು ಟಿಬಿ ಪ್ರಕರಣ ಕಂಡು ಬಂದ ಪ್ರದೇಶಗಳ ನಿರಾಶ್ರಿತರು, ವೃದ್ದಾಶ್ರಮಗಳು, ಬಿಡಿ ಕಾರ್ಮಿಕರು, ನೇಕಾರರು, ಹತ್ತಿ ಬಟ್ಟೆ ತಯಾರಕರು, ಬುಡಕಟ್ಟು ಜನಾಂಗದವರು ಹಾಗೂ ಅಪಾಯಕಾರಿ ಹಂತದಲ್ಲಿ ಇರುವ ಆಯ್ದ ಜನರನ್ನು ಗುರಿಯಾಗಿಸಿಕೊಂಡು ಈ ಆಂದೋಲನವು ನಡೆಯಲಿದೆ ಎಂದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿಬಂದ ಜನಜಾಗೃತಿ ಜಾಥಾದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ನಸಿರ್ಂಗ್ ವಿದ್ಯಾರ್ಥಿಗಳು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಜಗದೀಶ್ ಪಾಟ್ನೆ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು