ಬಳ್ಳಾರಿ,ಜು.18- ಇಂದಿನಿಂದ ಪ್ರತಿಮನೆಗೆ ಮುಂದಿನ ಆಗಸ್ಟ್ ಮಾಹೆಯವರೆಗೆ ಆರೋಗ್ಯ ಸಿಬ್ಬಂದಿಯವರು ಭೇಟಿ ನೀಡಿ ಕ್ಷಯರೋಗದ ಕುರಿತು ಮಾಹಿತಿ ನೀಡಲಿದ್ದು, ಕಫ ಲಕ್ಷಣವಿರುವ ಯಾರಿಗಾದರೂ ಪರೀಕ್ಷೆಗೆ ಸೂಚಿಸಿದಲ್ಲಿ ತಪ್ಪದೇ ಪರೀಕ್ಷೆ ಮಾಡಿಸುವ ಮೂಲಕ ಕ್ಷಯರೋಗ ನಿರ್ಮೂಲನೆಗೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಆರಂಭವಾದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದಡಿ ಕ್ಷಯರೋಗ ಪತ್ತೆ ಹಚ್ಚುವ ಕುರಿತು ಸೋಮವಾರದಂದು ನಗರದ ಬಂಡಿಹಟ್ಟಿ, ಆಶ್ರಯಕಾಲೋನಿ, ಕವಾಡಿ ಸ್ಟ್ರೀಟ್‍ಗಳಲ್ಲಿ ಆರೋಗ್ಯ ಸಿಬ್ಬಂದಿಗಳ ತಂಡ ಕೈಗೊಂಡಿದ್ದ ಮನೆ ಭೇಟಿ ಕಾರ್ಯದಲ್ಲಿ ಅವರು ಮಾತನಾಡಿದರು.
ಇಂದಿನಿಂದ ರಾಜ್ಯಾದ್ಯಂತ ಈ ಅಭಿಯಾನವು ಆರಂಭವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಆರೋಗ್ಯ ತಂಡವು ಮನೆ-ಮನೆಗಳಿಗೆ ಭೇಟಿ ನೀಡಲಿದೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು. ಕಡಿಮೆಯಾಗದ ಕೆಮ್ಮು, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಮ್ಮಿದಾಗ ಕಫದಲ್ಲಿ ರಕ್ತ ಬೀಳುವುದು, ಹಸಿವಾಗದಿರುವುದು, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಪದೇ ಪದೇ ಎದೆ ನೋವು ಕಂಡುಬಂದಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 16,37,817 ಜನಸಂಖ್ಯೆಯಲ್ಲಿ ಕೊಳಚೆ ಪ್ರದೇಶ, ವಲಸೆ ಪ್ರದೇಶ, ಕಾರ್ಖಾನೆಯ ಕಾರ್ಮಿಕರು, ಹೆಚ್ಚು ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಹೆಚ್ಚು ಆದ್ಯತೆ ನೀಡಿ 2,69,751 ಜನಸಂಖ್ಯೆಯನ್ನು (ಶೇ.15) ಕೇಂದ್ರೀಕರಿಸಿ 359 ತಂಡಗಳು 89 ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದು ಯಾರಿಗಾದರೂ ಎರಡು ವಾರಕ್ಕಿಂತ ಹೆಚ್ಚು ದಿನಗಳಿಂದ ಕೆಮ್ಮು ಹಾಗೂ ಇತರೆ ಲಕ್ಷಣಗಳಿದ್ದಲ್ಲಿ ತಪ್ಪದೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಫ ಪರೀಕ್ಷೆ ಕೈಗೊಳ್ಳಬೇಕು ಎಂದು ಹೇಳಿದರು.
ಈಗಾಗಲೇ ತಮ್ಮ ಕುಟುಂಬದಲ್ಲಿ ಯಾರಾದರೂ ಕ್ಷಯರೋಗದ ಚಿಕಿತ್ಸೆ ಪಡೆಯುತ್ತಿದ್ದರೆ ದಯವಿಟ್ಟು ಕಫ ಪರೀಕ್ಷೆ ಮಾಡಿಸಬೇಕು ಮತ್ತು ಮರುದಿನ ಬೆಳಿಗ್ಗೆ ಪುನಃ ಕಫ ಸಂಗ್ರಹಿಸಿ ತಂಡಕ್ಕೆ ನೀಡಬೇಕು, ಒಂದು ವೇಳೆ ಕಫ ಪರೀಕ್ಷೆ ಫಲಿತಾಂಶ ನೆಗೆಟಿವ್ ಎಂದು ಬಂದರೆ ಎಕ್ಸ್-ರೇ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು. ಇದರಿಂದ ಸಮಗ್ರವಾಗಿ ರೋಗ ಪತ್ತೆಗೆ ಸಹಕಾರಿಯಾಗುವುದು ಎಂದು ತಿಳಿಸಿದರು.
ಒಂದು ವೇಳೆ ರೋಗವು ಖಚಿತಪಟ್ಟಲ್ಲಿ 06 ತಿಂಗಳು ಉಚಿತ ಚಿಕಿತ್ಸೆ ನೀಡುವುದರ ಜತೆಗೆ ರೂ.500 ಗಳನ್ನು ಚಿಕಿತ್ಸಾ ಅವಧಿಯಲ್ಲಿ ರೋಗಿಯ ಬ್ಯಾಂಕ್ ಖಾತೆಗೆ ನೇರ ಜಮಾ ಮಾಡಲಾಗುವುದು. ಒಮ್ಮೆ ಚಿಕಿತ್ಸೆ ಆರಂಭಿಸಿದ ನಂತರ ಮಧ್ಯದಲ್ಲಿ ಚಿಕಿತ್ಸೆ ನಿಲ್ಲಿಸಬಾರದು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ ಡಾ.ಜನಾರ್ಧನ ಅವರು, ಈಗಾಗಲೇ ಜಿಲ್ಲೆಯಲ್ಲಿ 1231 ಜನ ಚಿಕಿತ್ಸೆ ಪಡೆಯುತ್ತಿದ್ದು ನಿಕ್ಷಯಮಿತ್ರ ಯೋಜನೆಯಡಿ 41 ದಾನಿಗಳಿಂದ 1223 ಪೌಷ್ಟಿಕ ಆಹಾರ ಕಿಟ್ ಪೂರಕವಾಗಿ ವಿತರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ಯಾಸ್ಮೀನ್.ಎಸ್, ಡಾ.ಕಾಶಿಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಸಿಬ್ಬಂದಿ ದಾನಕುಮಾರಿ, ಪಾರ್ವತಿ, ಪ್ರದೀಪ್, ಮಹಾಲಿಂಗ, ಸಾವಿತ್ರಿ, ಕಲಾವತಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.