ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುಖ್ಯಮಂತ್ರಿ ಸ್ಪಂದನೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.12: ಹೊಸಪೇಟೆ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕೆಂಬ ಮನವಿಗೆ ಮುಖ್ಯಮಂತ್ರಿ ಸಿದ್ದರಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು
ನಗರದಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ನೂತನ ರೈತ ಭವನ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಹಂಪಿ ಶುರ್ಸ್ ಕೋರಿದ ಂತೆ 80 -90 ಎಕರೆ ಜಾಗ ನೀಡಲು ಸಾಧ್ಯವಿಲ್ಲ. ಇಂದಿನ ಸುಧಾರಿತ ತಂತ್ರಜ್ಞಾನ ಬಳಕೆ ಮಾಡಿಕೊಂಡು 40 -50 ಎಕರೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವಂತಾಗ ಬೇಕು. ಹೊಸಪೇಟೆಯಲ್ಲೂ ಅನೇಕ ಧನವಂತರು, ಉದ್ಯಮಿಗಳೂ ಇದ್ದಾರೆ. ಅವರಲ್ಲಿ ಯಾರಾದರೂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುಂದೆ ಬಂದರೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ನಮ್ಮ ಸರ್ಕಾರಕ್ಕೆ ರೈತರ ಹಿತವೇ ಮುಖ್ಯವಾಗಿದ್ದು, ರೈತರು ಒಪ್ಪಿಗೆ ಸ್ಥಳದಲ್ಲಿ ಸಕ್ಕರೆ ಕಾರ್ಖಾನೆಗೆ ಭೂಮಿ ಗುರುತಿಸಲಾಗುವುದು.
ಜಂಬುನಾಥ ಹಳ್ಳಿಯಲ್ಲಿರುವ ಸರ್ಕಾರಿ ಜಾಗೆಯಲ್ಲಿ ಬಡವರಿಗೆ ನಿವೇಶನ ಕಲ್ಪಿಸಬೇಕಿದೆ. ಹೀಗಾಗಿ ಹಂಪಿ ಶುರ್ಸ್ಗೆ 84 ಎಕರೆ ಜಮೀನು ಕೊಡಲು ಸಾಧ್ಯವಿಲ್ಲ. ಹೊಸಪೇಟೆಯ ಇತರೆ ಭಾಗದಲ್ಲಿ ಸೂಕ್ತ ಜಮೀನು ಗುರುತಿಸಬೇಕಿದೆ. ಅದಕ್ಕಾಗಿ ಕಾಳಗಟ್ಟ, ನಾಗೇನಹಳ್ಳಿ ಭಾಗದಲ್ಲಿ ಒಂದೆರಡು ಕಡೆ ಜಮೀನು ನೋಡಿದ್ದೇವೆ. ರೈತರು ಕೂಡ ಅದನ್ನು ವೀಕ್ಷಿಸಿ, ಒಪ್ಪಿಗೆ ಸೂಚಿಸಿದ ಬಳಿಕವೇ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಭರವಸೆ ನೀಡಿದರು.
ಈ ವರ್ಷ ಮಳೆಯ ಕೊರತೆಯಿಂದಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಿಲ್ಲ. ಜಲಾಶಯದಲ್ಲಿ ಸದ್ಯ 70 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೆಳ ಭಾಗದ ರೈತರಿಗೆ ನೀರಿನ ತೊಂದರೆಯಾಗದಂತೆ ಕ್ರಮವಹಿಸುವಂತೆ ಟಿ.ಬಿ.ಡ್ಯಾಂ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ರೈತ ಸಂಘದ ಮಾಜಿ ಅಧ್ಯಕ್ಷರಾದ ಗೋಸಲ ಭರ್ಮಪ್ಪ, ಕಿಚಿಡಿ ಲಕ್ಷ್ಮಣ ಅಧ್ಯಕ್ಷ ಎಂ.ಜೆ.ಜೋಗಯ್ಯ, ಪ್ರಮುಖರಾದ ಉತ್ತಂಗಿ ಕೊಟ್ರೇಶ್, ಪರಸಪ್ಪ, ಡಿ.ಹನುಮಂತಪ್ಪ, ಜಿ.ಅಶೋಕ್, ಗೌಡರ ರಾಮಚಂದ್ರ, ಗುಂಡಿ ರಾಘವೇಂದ್ರ, ಗುಜ್ಜಲ ನಾಗರಾಜ, ಎಂ.ಜಂಬಯ್ಯ ನಾಯಕ, ಆರ್.ಭಾಸ್ಕರರೆಡ್ಡಿ. ಯಲ್ಲಾಲಿಂಗ, ಡಿ.ಜಂಬಣ್ಣ, ವೀರಭದ್ರಾ ನಾಯಕ ನೂರಾರು ರೈತರು ಇದ್ದರು.