ಸಕ್ಕರೆ ಕಾರ್ಖಾನೆಯ ಒಂದು ಇಂಚು ಜಾಗ ದುರ್ಬಳಕೆಯಾಗಲ್ಲ: ಶ್ರೀರಾಮುಲು

ಕಂಪ್ಲಿ ಡಿ 20 : ಸಕ್ಕರೆ ಕಾರ್ಖಾನೆಯ ದಾಖಲೆಗಳು ಸಂಪೂರ್ಣವಾಗಿ ಕಾನೂನು ಬದ್ಧವಾಗಿದ್ದು, ಯಾರಿಗಾದರೂ ದಾಖಲೆಗಳು ಬೇಕಿದ್ದಲ್ಲಿ ಮಾಹಿತಿ ಹಕ್ಕು ಅಡಿಯಲ್ಲಿ ಪಡೆಯಬಹುದು. ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಗಾಳಿ ಸುದ್ದಿ ಹಬ್ಬಿಸಿ ಜನರಲ್ಲಿ ಗೊಂದಲವನ್ನುಂಟು ಮಾಡುವ ಕೆಲಸಕ್ಕೆ ಯಾರು ಕೂಡ ಮುಂದಾಗಬಾರದು ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಈಚೆಗೆ ಕಂಪ್ಲಿ ಸಕ್ಕರೆ ಕಾರ್ಖಾನೆ ವಿಚಾರ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದರು.
ಅವರು ಶನಿವಾರ ಮಧ್ಯಾಹ್ನ ಇಲ್ಲಿನ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ತೀವ್ರಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1995-96ರಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆಯು ಟೆಂಡರ್ ಪ್ರಕ್ರಿಯೆ ಮೂಲಕ 8.09 ಕೋಟಿ ರೂ.ಗಳಿಗೆ ಮಾರಾಟವಾಗಿತ್ತು. ಬಳಿಕ 05.03.1999ರಲ್ಲಿ ಸುಂದರಿ ಶುಗರ್ಸ್ ಗೆ ನೋಂದಣಿ ಮಾಡಲಾಗಿತ್ತು. ಹೀಗೆ ಮಾರಾಟವಾಗಿದ್ದ ಕಾರ್ಖಾನೆಗೆ ಸಂಬಂಧಿಸಿದಂತೆ ಸುಂದರಿ ಶುಗರ್ಸ್ ವತಿಯಿಂದ ಆದಾಯ ತೆರಿಗೆ ಇಲಾಖೆಯ ಕ್ಯಾಪಿಟಲ್ ಗೇನ್ ಪಾವತಿಸಿರಲಿಲ್ಲ. ಈ ಹಿನ್ನೆಲೆ ಸಕ್ಕರೆ ಕಾರ್ಖಾನೆ ಜಾಗದ ವಿಚಾರವು ಕೋರ್ಟ್ ಮೆಟ್ಟಿಲೇರಿತ್ತು. ಅದರ ಬಳಿಕ ಸುಂದರಿ ಶುಗರ್ಸ್ 51 ಲಕ್ಷ 26 ಸಾವಿರ ರೂ.ಗಳನ್ನು ಕೋರ್ಟಿಗೆ ದಂಡ ಸಹಿತ ಕ್ಯಾಪಿಟಲ್ ಗೇನ್ ಪಾವತಿಸಿ ವಿವಾದ ಇತ್ಯರ್ಥಪಡಿಸಿಕೊಳ್ಳಲಾಯಿತು. ಇದೀಗ ಕಂಪ್ಲಿಯ ಸುಂದರಿ ಶುಗರ್ಸ ಸಕ್ಕರೆ ಕಾರ್ಖಾನೆಯ 176 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಪಾರದರ್ಶಕ ಹಾಗೂ ಕಾನೂನು ಬದ್ಧವಾಗಿವೆ. ಕಾರ್ಖಾನೆಯ ಒಂದೇ ಒಂದು ಇಂಚು ಜಾಗವನ್ನೂ ಕೂಡ ಕಾರ್ಖಾನೆಗಾಗಿಯೇ ಬಳಸಲಾಗುವುದು ವಿನಃ ದುರ್ಬಳಕೆಯಾಗಲು ಬಿಡಲ್ಲ. ತಾಲೂಕಿನ ರೈತರ ಆರ್ಥಿಕ ಸ್ಥಿತಿ ಚೇತರಿಕೆ ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ಪ್ರಮುಖ ಉದ್ದೇಶದಿಂದ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲಾಗುತ್ತಿದೆ. ಸಂಪೂರ್ಣ ಖಾಸಗಿ ವಲಯದಲ್ಲಿಯೇ ಕಾರ್ಖಾನೆ ಶುರುವಾಗಲಿದ್ದು, ರೈತರ ಪ್ರಗತಿ ಹೊರತುಪಡಿಸಿ ಬೇರೆ ಯಾವ ಉದ್ದೇಶ ಹೊಂದಿಲ್ಲ ಎಂದರು.
ಬಳಿಕ ಈಚೆಗೆ ಘಟಿಸಿದ ಮೇಲ್ಮನೆ ಜಟಾಪಟಿ ವಿಷಯಕ್ಕೆ ಪ್ರತಿಕ್ರಿಯಿಸಿ ಮೇಲ್ಮನೆ ಸದಸ್ಯರು ಅತ್ಯಂತ ಬುದ್ಧಿಜೀವಿಗಳೆಂದು ಬಣ್ಣಿತಗೊಂಡ ವ್ಯಕ್ತಿಗಳಾಗಿದ್ದಾರೆ. ಆದ್ರೆ ಹೀಗೆ ಎಲ್ಲಾ ರೀತಿಯಲ್ಲು ಉನ್ನತ ಸ್ಥಾನಮಾನ, ಗೌರವ ಹೊಂದಿರುವ ಮೇಲ್ಮನೆ ಸದಸ್ಯರಲ್ಲೆ ಗೊಂದಲ ಸೃಷ್ಟಿಯಾಗಿ ಜಟಾಪಟಿ ಜರುಗಿದ್ದು ದುರಾದೃಷ್ಟಕರ ಸಂಗತಿ. ಇದರಿಂದ ಮೇಲ್ಮನೆ ಸದಸ್ಯರೆ ತಮ್ಮ ಘನತೆ ಗೌರವವನ್ನು ಮಣ್ಣುಪಾಲು ಮಾಡಿಕೊಂಡಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಎನ್.ಪುರುಷೋತ್ತಮ, ಕೊಡಿದಲ ರಾಜು, ರಾಜು ಜೈನ್, ಡಾ.ವಿ.ಎಲ್.ಬಾಬು, ಹರ್ಷಿತ್ ಸೇರಿದಂತೆ ಅನೇಕರಿದ್ದರು.