ಸಕ್ಕರೆ ಕಾರ್ಖಾನೆಗಳ ರೈತ ವಿರೋಧಿ ನೀತಿ ಖಂಡಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ

ಅಫಜಲಪುರ:ಆ.23: ಕೃಷಿ ಕಾಯಕ ಮಾಡುವುದು ಹಿರಿಮೆಯ ಸಂಕೇತ ಎಂಬ ಭಾವನೆ ಇತ್ತೀಚೆಗೆ ಶಾಪವಾಗಿ ರೈತರಿಗೆ ಪರಿಣಮಿಸಿದೆ. ಅನ್ನದಾತನ ಬೆನ್ನು ಮೂಳೆ ಮುರಿದು ಆಳುವ ಸರ್ಕಾರಗಳು ಮೊಸಳೆ ಕಣ್ಣೀರು ಸುರಿಸುತ್ತಾ ರೈತಪರ ಸರ್ಕಾರ ಎಂದು ಅಧಿಕಾರ ಹಿಡಿದಿರುವುದು ಅವರ ಡೋಂಗಿತನ ಎಂಬುದು ರೈತರ ಅರಿವಿಗೆ ಬಂದಿದೆ ಎಂದು ಪ್ರಾಂತ ರೈತ ಸಂಘದ ಮುಖಂಡ ಶ್ರೀಮಂತ ಬಿರಾದಾರ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಸಕ್ಕರೆ ಇಳುವರಿ ಘೋಷಣೆಯಲ್ಲಿ ಮತ್ತು ತೂಕದಲ್ಲಿ ನಡೆಯುತ್ತಿರುವ ಮೋಸವನ್ನು ತಡೆಗಟ್ಟಲು ರೈತರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಬೇಕು.

ಅದರಂತೆ ರಾಜ್ಯ ಸರ್ಕಾರದ ಆದೇಶದಂತೆ 2022 – 23 ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ರೇಣುಕಾ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿ ಪಡಿಸಿದ ಎಫ್ ಆರ್ ಪಿ ದರ 3282 ರೂಪಾಯಿಯಲ್ಲಿ ಸಾರಿಗೆ ಮತ್ತು ಕಟಾವಿನ ವೆಚ್ಚ 620 ರೂ. ತೆಗೆದು ಉಳಿದ 2662 ರೂ. ಹಣದಲ್ಲಿ ಸದ್ಯ 2500 ರೂ. ಪಾವತಿಸಲಾಗಿದೆ. ಇನ್ನುಳಿದ 162 ರೂ. ಬಾಕಿ ಹಣ ಕೂಡಲೇ ಸಂದಾಯ ಮಾಡಬೇಕು.

ಅಲ್ಲದೆ ಭೀಮಾ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಿ, ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು. ಹಾಗೂ ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಹೋಗಿದ್ದು ಅದರಲ್ಲಿನ ಹೂಳು ತೆಗೆದು ನೀರು ಸಂಗ್ರಹ ಮಾಡುವಂತೆ ಒತ್ತಾಯಿಸಿದ ಅವರು ರೇಣುಕಾ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಪೂರೈಸಿದ ರೈತರಿಗೆ ಸುಮಾರು 30 ರಿಂದ 40 ಕೋಟಿ ಬಾಕಿ ಹಣ ಬರಬೇಕಾಗಿದ್ದು ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸ್ಥಳಕ್ಕೆ ಅಧಿಕಾರಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ ಭೇಟಿ ನೀಡಿದ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದರಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮುಂದುವರಿದಿದೆ.

ಇದೇ ವೇಳೆ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಚಿನ್ಮಯಗಿರಿಯ ವೀರಮಹಾಂತ ಶಿವಾಚಾರ್ಯರು ಹಾಗೂ ದುಧನಿಯ ಶಾಂತಲಿಂಗ ಸ್ವಾಮಿಗಳು ಬೆಂಬಲ ಸೂಚಿಸಿ ಮಾತನಾಡಿದರು.

ಸ್ಥಳಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಶಾಂತಗೌಡ ಗುಣಕಿ, ಎಸ್.ಆರ್.ಎಸ್.ಎಲ್ ವ್ಯವಸ್ಥಾಪಕ ಸಿ.ಎಸ್.ಸ್ವಾಮಿ, ಕೆ.ಪಿ.ಆರ್. ವ್ಯವಸ್ಥಾಪಕ ರಾಜಶೇಖರ ಭೇಟಿ ನೀಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಕಬ್ಬು ಬೆಳಗಾರರ ರಾಜ್ಯ ಸಂಚಾಲಕ ಭರತರಾಜ್ ರೈತ ಮುಖಂಡರಾದ ಸಿದ್ದು ದಣ್ಣೂರ, ಗುರು ಚಾಂದಕವಟೆ, ಯಶವಂತ ಪಟ್ಟೇದಾರ, ರಾಜುಗೌಡ ಪಾಟೀಲ, ಸಿದ್ದಣಗೌಡ ಪಾಟೀಲ, ಲಕ್ಣ್ಮಣ ಕಟ್ಟಿಮನಿ, ನಾಗಯ್ಯ ಹಿರೇಮಠ, ಸಂಜು ಸೋಲಾಪುರ ಸೇರಿದಂತೆ ಪ್ರತಿಭಟನೆಗೆ ತಾಲೂಕಿನ ನೂರಾರು ರೈತರು ಬೆಂಬಲ ಸೂಚಿಸಿದರು.