(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೪- ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಲ್ಲಿ ತೂಕ ವಂಚನೆಯಾಗುತ್ತಿರುವುದಕ್ಕೆ ತಡೆ ಹಾಕಲು ಕಬ್ಬು ಕಾರ್ಖಾನೆಗಳಲ್ಲಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಕಾರ್ಖಾನೆಗಳಿಂದಲೇ ತೂಕದ ಯಂತ್ರವನ್ನು ಅಳವಡಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದಪಾಟೀಲ್ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಬರಮಗೌಡ ಅಲಗೌಡ ಕಾಗೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಬ್ಬಿನ ಕಾರ್ಖಾನೆಗಳಲ್ಲಿ ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಬಗ್ಗೆ ಇದುವರೆಗೂ ಯಾವುದೇ ನಿರ್ದಿಷ್ಟ ದೂರುಗಳು ಬಂದಿಲ್ಲ. ಸಾರ್ವಜನಿಕವಾಗಿ ಈ ರೀತಿ ಹೇಳಲಾಗುತ್ತಿದೆ ಅಷ್ಟೆ. ಆದರೂ ಸಹ ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಮೋಸವಾಗುವುದನ್ನು ತಪ್ಪಿಸಲು ಮುಂದಿನ ದಿನಮಾನಗಳಲ್ಲಿ ಸಕ್ಕರೆ ಇಲಾಖೆಯಿಂದಲೇ ತೂಕದ ಯಂತ್ರಗಳನ್ನು ಅಳವಡಿಸಲು ನಿರ್ಧಾರ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು ೭೨ ಸಕ್ಕರೆ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಿಂದ ಹೊರ ಹೋಗುವ ಕಲುಷಿತ ನೀರಿನಿಂದ ಆಗಿರುವ ತೊಂದರೆಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಕಲುಷಿತ ನೀರನ್ನು, ಹಳ್ಳಗಳು, ನದಿಗಳಿಗೆ ಸಂಸ್ಕರಣೆ ಮಾಡದೆ ಹೊರ ಬೀಡುವ ಕಾರ್ಖಾನೆಗಳಿಗೆ ನೋಟಿಸ್ ನೀಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಬೆಳಗಾವಿಯ ಉಗಾರ್ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಿದ್ದೇವೆ. ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದ್ದೇವೆ. ಕಲುಷಿತ ನೀರನ್ನು ಹೊರ ಬಿಟ್ಟಿರುವುದು ಸಾಬೀತಾದರೆ ಕಾನೂನು ರೀತಿಯಲ್ಲಿ ಶಿಕ್ಷೆ, ದಂಡ ವಿಧಿಸಿ, ಶಿಕ್ಷೆ ನೀಡಲು ಅವಕಾಶವಿದೆ ಎಂದರು.
ಕಾರ್ಖಾನೆಗಳ ಕಲುಷಿತ ನೀರನ್ನು ಹೊರಬಿಡುವ ಕಾರ್ಯದ ಮೇಲೆ ಪರಿಸರ ಮಾಲಿನ್ಯ ಮಂಡಳಿ ನಿಗಾ ಇಡಬೇಕಾಗುತ್ತದೆ. ಆ ಇಲಾಖೆ ಅರಣ್ಯ ಸಚಿವರ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಅವರ ಜತೆಯೂ ನಾನು ಮಾತನಾಡುತ್ತೇನೆ. ಸಕ್ಕರೆ ಕಾರ್ಖಾನೆಗಳ ಮೇಲೆ ನಿಗಾ ವಹಿಸಲು ಪರಿಸರ ಮಾಲಿನ್ಯ ಮಂಡಳಿಯ ಒಂದು ತಂಡವೇ ನಿರಂತರವಾಗಿ ಸಕ್ಕರೆ ಇಲಾಖೆ ಜತೆ ಕೆಲಸ ಮಾಡುವ ಅವಶ್ಯಕತೆಯೂ ಇದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಕಾಂಗ್ರೆಸ್ ಲಕ್ಷ್ಮಣಸವದಿ ಅವರು, ಸಚಿವರು ರೈತರ ಪರವಾಗಿದ್ದಾರೆ. ಯಾಕೆಂದರೆ ಅವರಿಗೆ ಅವರು ಯಾವುದೇ ಸಕ್ಕರೆ ಕಾರ್ಖಾನೆಯ ಮಾಲೀಕರಲ್ಲ. ತೂಕದಲ್ಲಿ ಮೋಸ ತಡೆಗಟ್ಟಲು, ತೂಕದ ಯಂತ್ರದ ಅಳವಡಿಸುವ ಯೋಜನೆ ಒಳ್ಳೆಯದು. ಸಕ್ಕರೆ ಕಾರ್ಖಾನೆಗಳ ಬಗ್ಗೆ ಮಾತನಾಡಲು ಅರ್ಧ ಗಂಟೆ ಅವಕಾಶ ನೀಡಬೇಕು. ಇದರಿಂದ ಸಕ್ಕರೆ ಕಾರ್ಖಾನೆಗಳ ಬಗ್ಗೆ ಕೂಲಂಕೂಷವಾಗಿ ಚರ್ಚಿಸಲು ಅವಕಾಶ ಸಿಗುತ್ತದೆ ಎಂದು ಸವದಿಹೇಳಿದಾಗ, ಅದಕ್ಕೆ ಸಭಾಧ್ಯಕ್ಷರು ಒಪ್ಪಿ, ಈ ಕುರಿತು ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದರು.
ಇದಕ್ಕೂ ಮೊದಲು ಪ್ರಶ್ನೆ ಕೇಳಿದ್ದ ಬರಮಗೌಡ ಕಾಗೆ ಅವರು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿದ್ದು ಈ ಕಾರ್ಖಾನೆಗಳು ಕಲುಷಿತ ನೀರನ್ನು ಹೊರ ಬಿಡುತ್ತಿರುವುದರಿಂದ ಹಳ್ಳಿಗಳ ಬಾವಿಗಳಲ್ಲಿ ಕುಡಿಯುವ ನೀರು ಕಲುಷಿತವಾಗುತ್ತಿದೆ. ಜನರಿಗೆ ತೊಂದರೆಯಾಗುತ್ತಿದೆ. ಎಂಬುದನ್ನು ಸರ್ಕಾರದ ಗಮನಕ್ಕೆ ತಂದು, ಈ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.