ಸಕ್ಕರೆ ಕಾಯಿಲೆ ಕುರಿತ ರಾಷ್ಟ್ರೀಯ ಸಮ್ಮೇಳನ

ಬೆಂಗಳೂರು:ಮೇ.೨೬ ವಿಶ್ವದಾದ್ಯಂತ, ಅದರಲ್ಲೂ ಭಾರತದಲ್ಲಿ ಸಕ್ಕರೆ ಕಾಯಿಲೆ ಮಿಂಚಿನ ವೇಗದಲ್ಲಿ ಹರಡುತ್ತಿದೆ. ಚಿಕ್ಕಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ ಎಂದು ಅಹಮದಬಾದ್‌ನ ಆರ್‌ಎಸ್‌ಎಸ್‌ಡಿಐ ಮಾಜಿ ಅಧ್ಯಕ್ಷ ಡಾ. ಬನ್ಸಿ ಸಾಬ್ ಹೇಳಿದ್ದಾರೆ.
ಬಸವೇಶ್ವರನಗರದ ಡಾ. ಅರವಿಂದ ಡಯಾಬಿಟೀಸ್ ಸೆಂಟರ್ ಏರ್ಪಡಿಸಿದ್ದ ಸಕ್ಕರೆ ಕಾಯಿಲೆ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಇಂದು ಉದ್ಘಾಟಿಸಿ ಮಾತನಾಡಿದರು. ಮಿತ ಆಹಾರ, ನಿಯಮಿತ ವ್ಯಾಯಾಮ, ತೂಕ ಇಳಿಸುವುದು, ಕುರುಕಲು ತಿಂಡಿಗೆ ಕಡಿವಾಣ ಹಾಕುವುದು ಸಕ್ಕರೆ ಕಾಯಿಲೆ ತಡೆಗೆ ಉತ್ತಮ ವಿಧಾನ ಎಂದರು.
ಚಿಕ್ಕಮಕ್ಕಳಲ್ಲಿ ಸಕ್ಕರೆ ಕಾಯಿಲೆ ಕಾಣಿಸಿಕೊಂಡಾಗ ಪಾಲಕರು ಮಗುವಿನ ಆಹಾರ ಹಾಗೂ ಬೆಳವಣಿಗೆ ಬಗ್ಗೆ ಗಮನವಹಿಸುವುದು ಸೂಕ್ತ ಎಂದು ಬನ್ಸಿ ಸಾಬ್ ತಿಳಿಸಿದರು.
ಅರವಿಂದ್ ಡಯಾಬಿಟೀಸ್ ಸೆಂಟರ್‌ನ ಅಧ್ಯಕ್ಷ ಡಾ. ಅರವಿಂದ ಜಗದೀಶ್, ಸಂಸ್ಥೆ ಕೆಲವು ವರ್ಷಗಳಿಂದ ರಾಷ್ಟ್ರೀಯ ಸಮ್ಮೇಳನದ ಮೂಲಕ ಈ ಕಾಯಿಲೆ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಸಕ್ಕರೆ ಕಾಯಿಲೆ ತಡೆಗೆ ಹೊಸಹೊಸ ಆವಿಷ್ಕಾರಗಳನ್ನು ತಿಳಿಸುವುದು ಸೆಂಟರ್‌ನ ಉದ್ದೇಶವಾಗಿದೆ ಎಂದರು.
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ತಜ್ಞವೈದ್ಯರು ಸಕ್ಕರೆ ಕಾಯಿಲೆ ತಡೆ ಬಗ್ಗೆ ಉಪಯುಕ್ತ ಸಲಹೆ ನೀಡಿದರು. ಮೊದಲ ದಿನ ಸುಮಾರು ೩೦೦ ತಜ್ಞ ವೈದ್ಯರು ಭಾಗವಹಿಸಿದ್ದರು.