ಸಕ್ಕರೆನಾಡಲ್ಲಿ ಕೇಸರಿ ಪಡೆ ಅಬ್ಬರ: ಅಭ್ಯರ್ಥಿ ಪರ ರಾಜಾಹುಲಿ ಭರ್ಜರಿ ಪ್ರಚಾರ

ಮಂಡ್ಯ, ಡಿ.06:- ಕೆಆರ್ ಪೇಟೆಯಲ್ಲಿ ಗೆದ್ದು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ಇಲ್ಲಿ ನಿಂತು ಮಾತನಾಡುವುದಕ್ಕೆ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದ ಬಿಎಸ್ ಯಡಿಯೂರಪ್ಪನವರು ಕಾರಣ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಪರ ಮಂಡ್ಯದ ಕಾಳಿಕಾಂಬ ಸಮುದಾಯ ಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಸಚಿವರಾದ ಡಾ.ಸಿಎನ್ ಅಶ್ವಥ್ ನಾರಾಯಣ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‍ವೈ ಸ್ಪಷ್ಟನೆ
ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಪಕ್ಷದ ಜೊತೆ ಯಾವುದೇ ಹೊಂದಾಣಿಕೆ ಇಲ್ಲ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ಕೇಳಿದ್ದೇವೆ ಅಷ್ಟೇ. ಆದರೆ ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ ಮೈತ್ರಿ ಇಲ್ಲ. ಇದನ್ನ ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ ಎಂದು ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪರವರು ಹೇಳಿದರು.
ಮಂಡ್ಯ ಜಿಲ್ಲೆಯಲ್ಲೂ ಬಿಜೆಪಿ ಕಟ್ಟಿ ಬೆಳೆಸ್ತೇನೆ ಎಂದು ಪಣತೊಟ್ಟು, ಕೆಆರ್ ಪೇಟೆಯಲ್ಲಿ ಗೆದ್ದು ನಾರಾಯಣಗೌಡ ಅವರು ಸಚಿವರಾಗಿದ್ದಾರೆ. ಇವತ್ತು
ನನಗೆ ನೀಡಿದ ಸ್ವಾಗತ ನೋಡಿ ನಾನು ಮಂಡ್ಯಗೆ ಬಂದಿದ್ದೇನೋ, ಶಿವಮೊಗ್ಗಕ್ಕೆ ಬಂದಿದ್ದೆನೋ ಅನ್ನೋ ಅನುಮಾನ ಮಾಡುವಂತಾಯಿತು ಎಂದು ಬಿಎಸ್‍ವೈ ಸಂತಸ ವ್ಯಕ್ತಪಡಿಸಿದರು.
ಪಾಂಡವಪುರದಲ್ಲಿ ಉತ್ತಮವಾಗಿ ಸಕ್ಕರೆ ಕಾರ್ಖಾನೆ ನಡೆಯುತ್ತಿದೆ. ಆದಷ್ಟು ಬೇಗ ಮೈಶುಗರ್ ಕಾರ್ಖಾನೆ ಕೂಡ ಆರಂಭವಾಗಲಿದೆ. ನಾರಾಯಣಗೌಡರ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ನಾಲ್ಕೈದು ಸ್ಥಾನಗಳನ್ನ ಗೆಲ್ಲಬೇಕು. ನಾನು ಕೈ ಜೋಡಿಸುತ್ತೇನೆ
ಕಾಂಗ್ರೆಸ್ ನಾಯಕರಿಗೆ ಹೇಳುತ್ತೇನೆ, ಹಣ, ಹೆಂಡದ ಬಲದಿಂದ ಜಾತಿ ವಿಷ ಬೀಜ ಬಿತ್ತುತ್ತಿದ್ದ ನಿಮ್ಮ ಕಾಲ ಹೋಗಿದೆ. ರಾಜ್ಯದಲ್ಲಿ ಒಂದಿಬ್ಬರಿಂದ ಸ್ವಲ್ಪ ಉಸಿರಾಡುತ್ತಿದೆ. ಆ ಉಸಿರನ್ನು ನಿಲ್ಲಿಸಬೇಕು ಅಂದ್ರೇ, ನಮ್ಮ ಅಭ್ಯರ್ಥಿ ಬಿಸಿ ಮಂಜು ಅವರನ್ನು ಗೆಲ್ಲಿಸಬೇಕು ಎಂದು ಬಿಎಸ್‍ವೈ ಕರೆ ನೀಡಿದರು.
ನರೇಂದ್ರ ಮೋದಿಯವರ ನಾಯಕತ್ವಕ್ಕೆ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ. ಅಂತಹ ಮಹಾನ್ ನಾಯಕರ ಪಕ್ಷದಲ್ಲಿ ಸದಸ್ಯರು ಆಗಿರೋದು ಹೆಮ್ಮೆ ವಿಚಾರ. 20 ಸ್ಥಾನದಲ್ಲಿ ಮಂಜು ಸೇರಿ 17-18 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಸ್ವಂತ ಜಿಲ್ಲೆ ಮಂಡ್ಯದಲ್ಲಿ ಈ ರೀತಿಯ ಸ್ವಾಗತ ಸಿಗುತ್ತೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಪ್ರಾಮಾಣಿಕವಾಗಿ ಹೇಳ್ತೇನೆ ಇಷ್ಟು ಜನ ಸೇರ್ತಾರೆ ಎಂದು ಊಹಿಸಿರಲಿಲ್ಲ. ನಾರಾಯಣಗೌಡರು ಹಾಗೂ ಎಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ವಿಜಯೇಂದ್ರ ಸೇರಿದಂತೆ ನಮ್ಮ ಪಕ್ಷದ ನಾಯಕರ ಜೊತೆ ಮತ್ತೆ ಬರುತ್ತೇನೆ. ಮುಂದಿನ ಚುನಾವಣೆಯಲ್ಲಿ 140 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಬಿಎಸ್ ಯಡಿಯೂರಪ್ಪನವರು ಹೇಳಿದರು.